ಬೆಂಗಳೂರು: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯಕ್ಕೆ ದಿನಕ್ಕೆ 400 ಟನ್ ದ್ರವೀಕೃತ ಆಮ್ಲಜನಕವನ್ನು (ಆಕ್ಸಿಜನ್) ಪೂರೈಕೆ ಮಾಡಲು ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪನಿ ಒಪ್ಪಿಕೊಂಡಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊವಿಡ್ -19 ಪ್ರಕರಣಗಳ ಸಂಖ್ಯೆಯು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪರಿಣಾಮವಾಗಿ ಅಪಾರ ಸಂಖ್ಯೆಯ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ದಾಖಲಾದ ರೋಗಿಗಳಿಗೆ ಆಮ್ಲಜನಕದ ಪೂರೈಕೆ ಕೊರತೆಯು ಗಂಭೀರ ಸ್ಥಿತಿಯಲ್ಲಿದೆ. ಪ್ರಸ್ತುತ ಜಿಂದಾಲ್ನಿಂದ 400 ಟನ್ ಆಕ್ಸಿಜನ್ ಸಿಗುತ್ತಿದೆ. ಬೇರೆ ಸ್ಟೀಲ್ ಪ್ಲಾಂಟ್ ನವರಿಂದ 200 ಟನ್ ಸಿಗಲಿದೆ. ಒಟ್ಟು 600 ಟನ್ ಪ್ರತಿದಿನ ಆಕ್ಸಿಜನ್ ಸಿಗಲಿದೆ. ನಮ್ಮ ರಾಜ್ಯಕ್ಕೆ ಪ್ರತಿದಿನ 600 ಟನ್ ಆಕ್ಸಿಜನ್ ಸಾಕಾಗಲಿದೆ ಎಂದು ಹೇಳಿದರು.
ಬಲ್ಡೋಟಾ ಗಣಿ ಕಂಪನಿ ಬಂದ್ ಮಾಡಿದ್ದಾರೆ. ಈಗ ಅನಿವಾರ್ಯವಾಗಿ ನಮಗೆ ಆಕ್ಸಿಜನ್ ಬೇಕಾಗಿದೆ. ಹಾಗಾಗಿ ಅವರಿಗೆ ಮರು ಪ್ರಾರಂಭಿಸುವಂತೆ ಸೂಚಿಸಿದ್ದೇವೆ. ಪ್ರಸ್ತುತ ಸಿಗುತ್ತಿದ್ದ ಆಕ್ಸಿಜನ್ ಕೈಗಾರಿಕೆಗೆ ಸಾಕಾಗುತ್ತಿತ್ತು. ಬೇರೆ ಸ್ಟೀಲ್ ಕಂಪನಿಗಳ ಜೊತೆಯೂ ಸಭೆ ಮಾಡಿದ್ದೇವೆ. ದಿನದಿಂದ ದಿನಕ್ಕೆ ರೋಗಿಗಳು ಹೆಚ್ಚಾಗುತ್ತಿರುವುದರಿಂದ ಈಗಿರುವ ಪೂರೈಕೆ ಪ್ರಕಾರ ಕೇವಲ ಕೈಗಾರಿಕಾ ಉದ್ದೇಶಕ್ಕೆ ಬಳಕೆಯಾಗ್ತಿತ್ತು. ಪ್ರಥಮ ಆದ್ಯತೆಯಾಗಿ ಪರಿಗಣಿಸಿ ಆಸ್ಪತ್ರೆಗಳಿಗೆ ಪೂರೈಕೆ ಮಾಡುವಂತೆ ಸೂಚಿಸಿದ್ದೇವೆ ಎಂದು ಹೇಳಿದರು.