ಕರ್ನಾಟಕ

karnataka

ETV Bharat / city

ರಾಜ್ಯದ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.70ರಷ್ಟು ‌ಉದ್ಯೋಗ ನೀಡಲು ಬದ್ದ : ಸಚಿವ ನಿರಾಣಿ ಭರವಸೆ

ರಾಜ್ಯದ ಯಾವುದೇ ಭಾಗದಲ್ಲೂ ಹೊಸದಾಗಿ ಕೈಗಾರಿಕೆ ಸ್ಥಾಪನೆ ಮಾಡಿದರೆ ಕನ್ನಡಿಗರಿಗೆ ಶೇ.70ರಷ್ಟು ಉದ್ಯೋಗಗಳನ್ನು ನೀಡಲೇಬೇಕು. ಇದು ನಮ್ಮ ಸರ್ಕಾರದ ಬದ್ದತೆ ಎಂದು ಸಚಿವ ನಿರಾಣಿ ಹೇಳಿದ್ದಾರೆ..

Minister murugesh nirani
Minister murugesh nirani

By

Published : Mar 18, 2022, 7:12 PM IST

ಬೆಂಗಳೂರು :ರಾಜ್ಯದ ಯಾವುದೇ ಭಾಗಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ 24 ಗಂಟೆಯೊಳಗೆ ಜಮೀನು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ.

ಹಾಗೆ ಡಾ.ಸರೋಜಿನಿ ಮಹಿಷಿ ವರದಿಯಂತೆ ರಾಜ್ಯದಲ್ಲಿ ಪ್ರಾರಂಭವಾಗುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ಕೊಡಬೇಕೆಂಬ ನಿಯಮದಲ್ಲಿ ನಾವು ಯಾವುದೇ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಕೈಗಾರಿಕೆ ಸಚಿವ ಮುರುಗೇಶ್​ ನಿರಾಣಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ವೇಳೆ ಶಾಸಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅವರು ಮಾತನಾಡಿದರು. ಕಾಂಗ್ರೆಸ್ ಶಾಸಕ ಯಶವಂತರಾಯ ವಿಠಲಗೌಡ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು ಸರ್ಕಾರ ಬದ್ದವಾಗಿದೆ.

ಯಾವುದೇ ಭಾಗದಲ್ಲಿ ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬಂದರೆ ಎಲ್ಲ ರೀತಿಯ ಸೌಕರ್ಯವನ್ನು ಕಲ್ಪಿಸಿಕೊಡಲು ಸಿದ್ದ ಎಂದು ತಿಳಿಸಿದರು.

ರಾಜ್ಯದಲ್ಲಿ ಈ ವರ್ಷ ನವೆಂಬರ್‌ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗಿದೆ.‌ ಈ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರಕವಾಗಿ ರಾಜ್ಯದ ವಿವಿಧೆಡೆ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರತಿ ತಾಲೂಕಿನಲ್ಲೂ ಕನಿಷ್ಠ 100 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಗಳಿಗೆ ಗುರುತಿಸುವ ಕಾರ್ಯ ನಡೆದಿದೆ ಎಂದರು.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಳೊಳ್ಳಿ ಹೋಬಳಿ ಬೂದಿಯಾಳ ಗ್ರಾಮದಲ್ಲಿ ಸರ್ಕಾರಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆ ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ ನಡೆದಿದೆ. ರಾಜ್ಯ ಹೆದ್ದಾರಿಗೆ ಈ ಜಮೀನು ಹತ್ತಿರದಲ್ಲಿದೆ. ಆದಷ್ಟು ಬೇಗ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳುವುದಾಗಿ ಹೇಳಿದ ಅವರು, ನಿಂಬೆ, ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗೆ ವಿಜಯಪುರ ಜಿಲ್ಲೆ ಹೆಸರಾಗಿದೆ. ಇದಕ್ಕೆ ಪೂರಕವಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳ ಜತೆ ಸಮನ್ವಯ ಮಾಡಲಿದೆ ಎಂದರು.

ವಾರದೊಳಗೆ ಪ್ರಾಥಮಿಕ ಅಧಿಸೂಚನೆ: ರಾಮನಗರ ಜಿಲ್ಲೆ ಮಾಗಡಿ ನಗರದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ ವತಿಯಿಂದ ಕೈಗಾರಿಕಾ ವಲಯ ಸ್ಥಾಪನೆ ಮಾಡಲು ಒಂದು ವಾರದೊಳಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ನಿರಾಣಿ ತಿಳಿಸಿದರು.

ಜೆಡಿಎಸ್‍ ಶಾಸಕ ಮಂಜುನಾಥ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾಗಡಿಯಲ್ಲಿ ಕೆಐಎಡಿಬಿ ವತಿಯಿಂದ ಕೈಗಾರಿಕಾ ವಲಯ ಸ್ಥಾಪನೆ ಮಾಡಲು 3 ಸಾವಿರ ಎಕರೆ ಜಮೀನನ್ನು ಗುರುತಿಸಿದ್ದೇವೆ. ಸ್ವತಃ ನಾನೇ ಅಧಿಕಾರಿಗಳ ಜತೆ ಈ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇನೆ. ಇಲ್ಲಿ ಕೈಗಾರಿಕಾ ವಲಯ ಅಗತ್ಯವಿರುವುದು ಗಮನಕ್ಕೆ ಬಂದಿದೆ. ಒಂದು ವಾರದೊಳಗೆ ಕೈಗಾರಿಕಾ ವಲಯ ಸ್ಥಾಪಿಸಲು ಅಧಿಸೂಚನೆ ಹೊರಡಿಸುವುದಾಗಿ ಹೇಳಿದರು.

ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ :ಬಿಜೆಪಿ ಶಾಸಕಿ ರೂಪಾಲಿ ಸಂತೋಷ್ ನಾಯ್ಕ್ ಪರವಾಗಿ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಯಾವುದೇ ಭಾಗದಲ್ಲೂ ಹೊಸದಾಗಿ ಕೈಗಾರಿಕೆ ಸ್ಥಾಪನೆ ಮಾಡಿದರೆ ಕನ್ನಡಿಗರಿಗೆ ಶೇ.70ರಷ್ಟು ಉದ್ಯೋಗಗಳನ್ನು ನೀಡಲೇಬೇಕು. ಇದು ನಮ್ಮ ಸರ್ಕಾರದ ಬದ್ದತೆ. ವಿಶೇಷವಾಗಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ, ಆದ್ಯತೆ ನೀಡಲಿದ್ದೇವೆ ಎಂದರು.

ಉತ್ತರ ಕನ್ನಡದಲ್ಲಿ ಕೈಗಾರಿಕೆಗಳ ಸ್ಥಾಪನೆ ಚರ್ಚೆ:ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ನಮ್ಮ ಸರ್ಕಾರ ಬದ್ದವಿದೆ. ಆದರೆ, ಇಲ್ಲಿ ಹೆಚ್ಚಿನ ಭೂ ಪ್ರದೇಶವು ಅರಣ್ಯ ಮತ್ತು ಪರಿಸರ ಇಲಾಖೆಗೆ ಸೇರಿರುವುದರಿಂದ ದೊಡ್ಡ ಮಟ್ಟದ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಅಡ್ಡಿಯಾಗಿದೆ ಎಂದು ಸಚಿವ ನಿರಾಣಿ ಹೇಳಿದರು. ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ, ಉತ್ತರಕನ್ನಡ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಶೇ.85ರಷ್ಟು ಭೂ ಪ್ರದೇಶವು ಅರಣ್ಯ ಪ್ರದೇಶಕ್ಕೆ ಸೇರುತ್ತದೆ.

ನೀವು ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾದರೆ ಅರಣ್ಯ, ಕಂದಾಯ, ಪರಿಸರ ಹೀಗೆ ನೂರಾರು ಇಲಾಖೆ ಅಧಿಕಾರಿಗಳು ತಗಾದೆ ತೆಗೆಯುತ್ತಾರೆ. ಕಡೆಪಕ್ಷ ಅಧಿಕಾರಿಗಳು ಸಹ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸುವುದಿಲ್ಲ. ಹೀಗಾಗಿ, ಕೈಗಾರಿಕೆಗಳು ಜಿಲ್ಲೆಗೆ ಬರಲು ಹೇಗೆ ಸಾಧ್ಯ?. ಕಡೇ ಪಕ್ಷ ಜಿಲ್ಲೆಗೆ ದೊಡ್ಡ ಕೈಗಾರಿಕೆಗಳಾದರೂ ಬೇಡ. ಗೃಹ, ಗುಡಿ ಇಂತಹ ಕೈಗಾರಿಕೆಗಳನ್ನಾದರೂ ಸ್ಥಾಪಿಸಿ ಇದಕ್ಕೆ ಬೇಕಾದ ಭೂಮಿಯೂ ಲಭ್ಯವಿದೆ ಎಂದರು.

ಇದಕ್ಕೆ ದನಿಗೂಡಿಸಿದ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ, ನಮ್ಮ ಜಿಲ್ಲೆಯು ಭೌಗೋಳಿಕವಾಗಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಇಲ್ಲಿ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲು ಹಲವಾರು ಸಮಸ್ಯೆಗಳು ಎದುರಾಗುತ್ತವೆ. ನಾನೇ ಸಚಿವನಾಗಿದ್ದಾಗ ಎರಡ್ಮೂರು ಯೋಜನೆಗಳನ್ನು ತರಲು ಪ್ರಯತ್ನಿಸಿದ್ದೆ. ಆದರೆ, ಅರಣ್ಯ ಮತ್ತು ಪರಿಸರ ಇಲಾಖೆಗಳ ಅನುಮತಿ ಸಿಗದೆ ಇದು ಸಾಧ್ಯವಾಗಲಿಲ್ಲ.

ನಾವು ಅನೇಕ ಕಡೆ ಪ್ರವಾಸೋದ್ಯಮ ಇಲಾಖೆಯನ್ನು ಉತ್ತೇಜಿಸಲು ರೆಸಾರ್ಟ್, ಹೋಂಸ್ಟೇಗೆ ಪ್ರೋತ್ಸಾಹಿಸಿದ್ದೆವು. ಪರಿಣಾಮ ನಮ್ಮ ಜಿಲ್ಲೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಜಿಲ್ಲೆಯಾಗಿದೆ ಎಂದರು. ಈಗ ಮಾತು ಮುಂದುವರೆಸಿದ ಸಚಿವ ನಿರಾಣಿ, ಕಾರವಾರ ಮತ್ತು ಅಂಕೋಲ ತಾಲೂಕಿನಲ್ಲಿರುವ ಬಂದರುಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ದಿಪಡಿಸಲಾಗುವುದು.

ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಬದ್ದರಾಗಿದ್ದೇವೆ. ಹಿರಿಯರಾದ ದೇಶಪಾಂಡೆ ಮತ್ತು ಕಾಗೇರಿ ನೀಡಿರುವ ಸಲಹೆಯನ್ನು ಪರಿಗಣಿಸುತ್ತೇವೆ. ನಾನೇ ಖುದ್ದು ಇಬ್ಬರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಅಧಿವೇಶನ ಮುಗಿದ ನಂತರ ನಾನು ಮತ್ತು ನಮ್ಮ ಅಧಿಕಾರಿಗಳು ಜಿಲ್ಲೆಗೆ ಭೇಟಿ ಕೊಟ್ಟು ಎಲ್ಲಿ ಅಗತ್ಯವಿದೆಯೋ ಅಂತಹ ಕಡೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪರಿಶೀಲನೆ ಮಾಡುತ್ತೇವೆ. ನಮಗೆ ಸೂಕ್ತ ಇರುವ ಕಡೆ ಜಮೀನು ಲಭ್ಯವಿದ್ದರೆ ಖಂಡಿತವಾಗಿಯೂ ಕೈಗಾರಿಕೆ ಸ್ಥಾಪಿಸಲು ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಮೂರು ಜಿಲ್ಲೆಗಳ ಗಣಿಗಾರಿಕೆ ಪುನಶ್ಚೇತನಕ್ಕೆ ಅಗತ್ಯ ಕ್ರಮ : ಸಚಿವ ಜೆ.ಸಿ.ಮಾಧುಸ್ವಾಮಿ

ABOUT THE AUTHOR

...view details