ಬೆಳಗಾವಿ :ಬಲವಂತದ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ವಿಚಾರವಾಗಿ ಸುವರ್ಣ ವಿಧಾನಸೌಧದ ಕಾನೂನು ಸಚಿವ ಮಾಧುಸ್ವಾಮಿ ಕೊಠಡಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಕಾಯ್ದೆ ಕರಡು ಪ್ರತಿ ಮತ್ತು ಕಾನೂನಿನ ಸಾಧಕಬಾಧಕಗಳ ಬಗ್ಗೆ ಚರ್ಚೆ ಮಾಡಲಾಗಿದೆ.
ಕಾಂಗ್ರೆಸ್ ವಿರೋಧ ಹೇಳಿಕೆ ಹಿನ್ನೆಲೆ ಸಭೆ ನಡೆದಿದೆ. ಈ ಅಧಿವೇಶನದಲ್ಲಿ ಬಿಲ್ ಮಂಡಿಸಲು ಮುಂದಾಗಿರುವ ರಾಜ್ಯ ಸರ್ಕಾರ ಶತಾಯಗತಾಯ ವಿಧೇಯಕಕ್ಕೆ ಅನುಮೋದನೆ ಪಡೆಯಲು ಮುಂದಾಗಿದೆ.
ಮತಾಂತರ ನಿಷೇಧ ಕಾಯ್ದೆ ಕುರಿತು ಸಚಿವ ಮಾತು ಸಭೆಯ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, ಮತಾಂತರ ತಿದ್ದುಪಡಿ ಕಾಯ್ದೆ ಪ್ರಸ್ತಾಪ ಮಾಡುವ ವಿಚಾರವಾಗಿ ನಾವು ಎಲ್ಲವನ್ನೂ ಮಾಧ್ಯಮದವರ ಮುಂದೆ ಹೇಳಲಿಕ್ಕೆ ಆಗಲ್ಲ. ಕ್ಯಾಬಿನೆಟ್ಗೆ ತೆಗೆದುಕೊಂಡು ಹೋಗಿ ಅಲ್ಲಿ ಚರ್ಚೆ ಮಾಡಬೇಕು. ನೇರವಾಗಿ ಮಾಧ್ಯಮಗಳ ಮುಂದೆ ಹೇಳಿ ಬಳಿಕ ಕ್ಯಾಬಿನೆಟ್ಗೆ ತೆಗೆದುಕೊಂಡು ಹೋಗಿ ಹೆಚ್ಚು ಕಡಿಮೆ ಆದ್ರೆ. ಬಳಿಕ ನೀವೇ ಪ್ರಶ್ನೆ ಮಾಡ್ತೀರಿ. ಹೀಗಾಗಿ ನಾವು ಸದ್ಯ ಏನೂ ಹೇಳುವುದಿಲ್ಲ ಎಂದರು.
ಕಾನೂನು ಕೈಗೆತ್ತಿಕೊಳ್ಳಬೇಡಿ : ಎಂಇಎಸ್ ಮುಖಂಡನ ಮುಖಕ್ಕೆ ಮಸಿ ಬಳಿದ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸೆಕ್ಷನ್ 307 ಅಡಿಯಲ್ಲಿ ಎಫ್ಐಆರ್ ದಾಖಲು ಹಿನ್ನೆಲೆ ಪೊಲೀಸರಿಂದ ವಿವರ ತರಿಸುತ್ತಿದ್ದೇನೆ. ನಂತರ ಪ್ರತಿಕ್ರಿಯೆ ಕೊಡುತ್ತೇನೆ. ಬೆಳಗಾವಿ ಕನ್ನಡಿಗರು ಮತ್ತು ಮರಾಠಿಗರು ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ಪೊಲೀಸ್ ಇದೆ, ಸರ್ಕಾರ ಇದೆ, ಯಾರೂ ಸಹ ಕಾನೂನು ಕೈಗೆತ್ತಿಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.
ಸರ್ಕಾರಕ್ಕೆ ಸಂಬಂಧವಿಲ್ಲ : ಪರಿಷತ್ ರದ್ದು ಮಾಡಬೇಕು ಎಂದು ಸಚಿವ ಈಶ್ವರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಅದು ಅವರ ವೈಯುಕ್ತಿಕ ಹೇಳಿಕೆ. ಸರ್ಕಾರಕ್ಕೂ ಆ ಹೇಳಿಕೆಗೂ ಸಂಬಂಧ ಇಲ್ಲ ಎಂದರು.