ಬೆಂಗಳೂರು: ನೋ ವ್ಯಾಕ್ಸಿನ್, ನೋ ರೇಶನ್, ನೋ ಪೆನ್ಶನ್ ಅನ್ನೋದಕ್ಕೆ ಈ ಜಿಲ್ಲಾಧಿಕಾರಿ ಯಾರು ಎಂದು ಚಾಮರಾಜನಗರ ಜಿಲ್ಲೆಯ ಡಿಸಿ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಕಿಡಿಕಾರಿದ್ದು, ಪ್ರಧಾನಮಂತ್ರಿಗಿಂತ ಜಿಲ್ಲಾಧಿಕಾರಿ ದೊಡ್ಡವರಾ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಜಿಲ್ಲಾಧಿಕಾರಿ ಯಾರ್ರೀ ನೋ ವ್ಯಾಕ್ಸಿನ್, ನೋ ರೇಷನ್, ನೋ ಪೆನ್ಶನ್ ಅಂತ ಹೇಳೋದಕ್ಕೆ..!? ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ, ನವೆಂಬರ್ ತನಕ ಉಚಿತ ಪಡಿತರ ನೀಡುವುದಾಗಿ ಮಾತನಾಡಿದ್ದಾರೆ. ಆದರೂ ಈ ಜಿಲ್ಲಾಧಿಕಾರಿ ಆದೇಶ ಉತ್ಪ್ರೇಕ್ಷೆ ಆಗಿದೆ ಎಂದು ಕಿಡಿಕಾರಿದರು.
ಮೋದಿ ಮೈಲೇಜ್ ಕಡಿಮೆಯಾಗಿಲ್ಲ: ಮೋದಿ ಮೈಲೇಜ್ ಕಡಿಮೆಯಾಗಿದೆ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ದೇಶದಲ್ಲಿ ಮೋದಿ ಅಲೆ ಇನ್ನೂ ಇದೆ. ಮೈಲೇಜ್ ಕಡಿಮೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಎಲ್ಲದಕ್ಕೂ ಚುನಾವಣೆಯೇ ಅಳತೆಗೋಲು. ಸುಳ್ಳು ಯಾರು ಹೇಳುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿದೆ. ಮುಂದೆ ನಾನೇ ಸಿಎಂ ಅಂತ ಹೇಳಿದ್ದರು. ಎರಡು ಕ್ಷೇತ್ರದಲ್ಲಿ ಚುನಾವಣೆ ನಿಂತು ಒಂದು ಕಡೆ ಸೋತರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎರಡು ಸೀಟ್ ಬರಲ್ಲ ಅಂತ ಹೇಳಿದ್ದರು. ಆದರೆ ಏನಾಯಿತು? ಯಾರು ಸುಳ್ಳು ಹೇಳಿದ್ದು? ಬೆಳಗಾವಿ ಉಪಚುನಾವಣೆ ಯಾರು ಗೆದ್ದರು?, ಸಿದ್ದರಾಮಯ್ಯ ಅಂದರೆ ಸುಳ್ಳು. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿದ್ದು ಬಿಜೆಪಿ. ದೇಶದಲ್ಲಿ, ಎಲ್ಲಾ ರಾಜ್ಯದಲ್ಲಿ ಬಿಜೆಪಿ ಬೆಳೆಯುತ್ತಿದೆ. ಕಾಂಗ್ರೆಸ್ ಎಲ್ಲೆಡೆ ನೆಲ ಕಚ್ಚುತ್ತಿದೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಗಣೇಶ ಹಬ್ಬಕ್ಕೆ ಅವಕಾಶ:ಬಿಜೆಪಿ ಸರ್ಕಾರ ರಾಜ್ಯದಲ್ಲಿದೆ. ರಾಜ್ಯದ ಜನರ ಆರೋಗ್ಯ ಮುಖ್ಯ. ಗಣೇಶ ಹಬ್ಬವನ್ನು ಆಚರಿಸಲು ಯಾವುದೇ ತೊಂದರೆ ಇಲ್ಲ. ಆದರೆ ಯಾವ ರೀತಿ ಆಗಬೇಕು ಅಂತಾ ನಿರ್ಧರಿಸುವುದು ಬಾಕಿ ಇದೆ. ಶಿವಮೊಗ್ಗದಲ್ಲಿ ಲಕ್ಷಾಂತರ ಜನ ಮೆರವಣಿಗೆ ಮಾಡುತ್ತಿದ್ದರು. ಆದರೆ ಈಗ ಮೆರವಣಿಗೆ ಬೇಡ ಅಂತ ಹಿಂದೂ ಮಹಾಸಭಾ ತೀರ್ಮಾನ ಮಾಡಿದೆ. ಇಂತಹ ನಿರ್ಧಾರಗಳು ಅಗತ್ಯ. ಹಬ್ಬ ಆಚರಣೆಗೆ ಅವಕಾಶ ಕೊಡುತ್ತೇವೆ. ಆದರೆ ಯಾವ ರೀತಿ ಆಗಬೇಕು ಅಂತ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.