ಮಂಗಳೂರು:ನಗರದಲ್ಲಿ ವೆನ್ಲಾಕ್ ಕೋವಿಡ್ ಆಸ್ಪತ್ರೆ ಸೇರಿ 8 ಮೆಡಿಕಲ್ ಕಾಲೇಜು ಆಸ್ಪತ್ರೆಗಳಿರುವ ಕಾರಣ, ಬೇರೆ-ಬೇರೆ ಜಿಲ್ಲೆಗಳಿಂದ ಕೋವಿಡ್ ಚಿಕಿತ್ಸೆಗೆಂದು ಬರುವವರ ಸಂಖ್ಯೆ ಅಧಿಕವಿದೆ. ಅಲ್ಲದೆ, ರೋಗ ಉಲ್ಬಣಗೊಂಡು ಕೊನೆಯ ಹಂತದಲ್ಲಿ ಬರುವವರ ಸಂಖ್ಯೆ ಹೆಚ್ಚಿರುವ ಕಾರಣ ದ.ಕ.ಜಿಲ್ಲೆಯಲ್ಲಿ ಮೃತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸಾಕಷ್ಟು ಆಸ್ಪತ್ರೆಗಳಿದ್ದರೂ ದ.ಕ.ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಡುವವರ ಸಂಖ್ಯೆ ಅಧಿಕವಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೀಗ ಇಡೀ ರಾಜ್ಯದಲ್ಲಿ ಕೋವಿಡ್ ಸೋಂಕಿತ ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ವೆನ್ಲಾಕ್ ಆಸ್ಪತ್ರೆ ಮಾತ್ರವಲ್ಲ, ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಾವಿನ ಸಂಖ್ಯೆಯಲ್ಲಿ ಹೆಚ್ಚಳದ ಬಗ್ಗೆ ವೈದ್ಯಕೀಯ ತಜ್ಞರಲ್ಲಿ ಚರ್ಚೆ ನಡೆಸಲಾಗಿದೆ. ಅವರು ಹೇಳುವಂತೆ, ಸೋಂಕಿತರು ಗಂಭೀರ ಸ್ಥಿತಿಯಲ್ಲಿರುವಾಗ ಆಸ್ಪತ್ರೆಗೆ ಬಂದಲ್ಲಿ ಎಷ್ಟೇ ಗುಣಮಟ್ಟದ ಚಿಕಿತ್ಸೆ ನೀಡಿದರೂ ಉಳಿಸುವ ಸಾಧ್ಯತೆ ಕಡಿಮೆ.