ಬೆಂಗಳೂರು :ಐಪಿಸಿ, ಸಿಆರ್‌ಪಿಸಿ, ಎವಿಡೆನ್ಸ್ ಆ್ಯಕ್ಟ್ ಅಮೆಂಡ್ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ. ಹಾಗಾಗಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ತರುವ ಕುರಿತು ನಮ್ಮ ಕಾನೂನು ಆಯೋಗದೊಂದಿಗೆ ಚರ್ಚಿಸಿ ನಿಯೋಗದೊಂದಿಗೆ ಕೇಂದ್ರಕ್ಕೆ ತಲುಪಿಸಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಪರಿಷತ್‌ಗೆ ತಿಳಿಸಿದ್ದಾರೆ.
ರೇಪಿಸ್ಟ್‌ಗಳ ಕೈ,ಕಾಲು ತೆಗೆಯುವ ಕಾನೂನು ನಮ್ಮ ದೇಶದಲ್ಲಿ ತರಲು ಸಾಧ್ಯವಿಲ್ಲ ; ಸಚಿವ ಮಾಧುಸ್ವಾಮಿ ನಿಯಮ 68ರ ಅಡಿ ಸಾರ್ವಜನಿಕ ಮಹತ್ವ ವಿಷಯದ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಭಾರತಿ ಶೆಟ್ಟಿ ಬಹಳ ವ್ಯಾಪಕವಾಗಿ ಮಾತನಾಡಿದ್ದಾರೆ. ಸಮಾಜ ಎಷ್ಟೇ ನಾಗರಿಕತೆಗೆ ಬಂದರೂ ಪಾಶವೀಕೃತ್ಯ ನಡೆಯುತ್ತಿದೆ. ಮನಸಿನಲ್ಲಿ ಆಗುವ ಭಾವನೆಗಳನ್ನ ಕಂಟ್ರೋಲ್ ಮಾಡದ ರೀತಿ ಘಟನೆ ನಡೆಯುತ್ತದೆ. ಭಾವನೆ ನಿಯಂತ್ರಣ ಮಾಡದೆ ಇರುವವರು ಮನುಷ್ಯರೇ ಅಲ್ಲ ಎಂದರು.
'ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಕಠಿಣ ಕ್ರಮ'
ಕ್ರಿಮಿನಲ್ ಲಾ ತಿದ್ದುಪಡಿಗೆ ಅಡಚಣೆ ಆಗಿದೆ. ಆ್ಯಸಿಡ್ ಹಾಕಿದರೆ ಏನು ಮಾಡಬೇಕು ಎನ್ನುವ ಕುರಿತು ಕಠಿಣ ಕ್ರಮಗಳು ಆಗಬೇಕು. ಆದರೆ, ಕಾಲು ಕಟ್ ಮಾಡು, ಕೈ ಕಟ್ ಮಾಡು ಅಂತಾ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜಾರಿ ಮಾಡೋಕೆ ಆಗಲ್ಲ. ಭಾರತಿ ಶೆಟ್ಟಿ ಹೇಳಿದ ರೀತಿ ಮಾಡಲು ನಮ್ಮ ದೇಶದಲ್ಲಿ ಅವಕಾಶ ಇಲ್ಲ. ಎಂತಹ ಕಾನೂನು ತಂದರೂ ರೇಪ್ ಆಗ್ತಾ ಇದೆ.
ಮಕ್ಕಳು ಮತ್ತು ಮಹಿಳೆಯ ಮೇಲೆ ಅತ್ಯಾಚಾರ ತಡೆಗೆ ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅತ್ಯಾಚಾರಿಗಳಿಗೆ ಕಠಿಣ ಕಾನೂನು ಕ್ರಮ ಜಾರಿ ಮಾಡಲು ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಭಾರತಿ ಶೆಟ್ಟಿ ಅವರಿಗೆ ಭರವಸೆ ನೀಡಿದರು.
ಅತ್ಯಾಚಾರಿಗಳನ್ನು ಕತ್ತಲೆ ಕೋಣೆಗೆ ಕಳಿಸುವುದು ಬಿಡುವುದು ನ್ಯಾಯಮೂರ್ತಿಗಳಿಗೆ ಸೇರಿದ್ದಾಗಿದೆ. ಶಿಕ್ಷೆ ಕೊಡುವ ಅಧಿಕಾರ ಇರುವುದು ಕೋರ್ಟ್‌ಗೆ, ನಾವು ಅದನ್ನ ಹೇಳಲು ಸಾಧ್ಯವಿಲ್ಲ. ಈ ಕುರಿತು ನಮ್ಮ ಕೈಯಲ್ಲಿ ಕಾನೂನು ತರಲು ಆಗಲ್ಲ. ಇದು ಸಂಸತ್‌ನಲ್ಲಿ ಆಗಬೇಕು. ಹಾಗಾಗಿ, ಈ ವಿಚಾರದಲ್ಲಿ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು.
ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಈ ಬಗ್ಗೆ ಶಿಕ್ಷಣ ಕೊಡಬೇಕ. ಅದಕ್ಕಾಗಿ ಶಿಕ್ಷಣ ನೀತಿಯಲ್ಲಿ ನೈತಿಕ ಶಿಕ್ಷಣ ಕೊಡಬೇಕು ಎನ್ನುವ ಬಗ್ಗೆ ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದರು.