ಬೆಂಗಳೂರು:ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ, ಇದರಿಂದ ಸರ್ಕಾರಕ್ಕೆ ಆಗಬೇಕಾಗಿರುವುದು ಏನೂ ಇಲ್ಲ. ನಮ್ಮ ಪೊಲೀಸರು ಸಮರ್ಪಕವಾಗಿ ಕೆಲಸ ಮಾಡಿ ತ್ವರಿತವಾಗಿ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಹಾದಿ ತಪ್ಪದಂತೆ ನೋಡಿಕೊಳ್ಳಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ವಿಧಾನ ಪರಿಷತ್‌ಗೆ ಭರವಸೆ ನೀಡಿದರು.
ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ: ಸಚಿವ ಮಾಧುಸ್ವಾಮಿ ನಿಯಮ 68ರ ಅಡಿ ಸಾರ್ವಜನಿಕ ಮಹತ್ವ ವಿಷಯದ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವ ಜೆಸಿ ಮಾಧುಸ್ವಾಮಿ, ಮೈಸೂರು ಘಟನೆ ದುರಾದೃಷ್ಟಕರ, ನಾಗರಿಕ ಸಮಾಜ ಒಪ್ಪುವಂತದ್ದಲ್ಲ. ಯಾವ ಸರ್ಕಾರವೂ ಇದನ್ನು ಸಹಿಸಲ್ಲ, ಆಗಸ್ಟ್ 24 ರಂದು ಘಟನೆ ನಡೆದಿದೆ. ಯುವಕನೇ ಆಸ್ಪತ್ರೆಗೆ ದಾಖಲಾಗಿಸಿದ್ದು, ಯುವಕನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಯುವತಿ ಮಾತನಾಡಲು ಆಗದ ಸ್ಥಿತಿಯಲ್ಲಿದ್ದರು.
ಈ ಕೇಸಿನ ಎಫ್ಐಆರ್ ದಾಖಲಿಸಲು ಪೊಲೀಸರು 15 ಗಂಟೆ ತಡ ಮಾಡಿದ್ದಾರೆ ಎನ್ನುವುದು ಸರಿಯಲ್ಲ, ಪೊಲೀಸರು ಪ್ರಕರಣವನ್ನು ಮತ್ತೊಂದು ಠಾಣೆಗೆ ಕಳುಹಿಸಿದ್ದಾರೆ, ಹಾಗಾಗಿ ಸಮಯವಾಗಿದೆ. ಎರಡು ಠಾಣೆ ಆಗಿದ್ದ ಕಾರಣ ಹಾಗೂ ಹುಡುಗ ಕೂಡ ಮೊದಲು ಸರಿಯಾಗಿ ಮಾಹಿತಿ ಕೊಡಲಿಲ್ಲ. ಹೀಗಾಗಿ ವಿಳಂಬವಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.
'ಪೊಲೀಸರು ಯಾರ ಪರವಾಗಿಯೂ ವರ್ತಿಸಿಲ್ಲ'
ಇದರಲ್ಲಿ ನಾವು ಯಾರನ್ನೋ ಉಳಿಸುತ್ತಿಲ್ಲ, ಉಳಿಸುವುದರಿಂದ ನಮಗೆ ಆಗಬೇಕಾಗಿರುವುದು ಏನೂ ಇಲ್ಲ. ಅವರು ಬೇರೆ ರಾಜ್ಯದವರು. ಯುವತಿಯನ್ನು ಒಪ್ಪಿಸಿ ದೂರು ಪಡೆಯಲು 8-10 ದಿನ ಆಗಿದೆ. ನಂತರ ಯುವತಿ ಹೇಳಿಕೆಯನ್ನು ಕೋರ್ಟ್‌ಗೆ ಕೊಡಿಸಲಾಗಿದೆ. ನಮ್ಮ ಪೊಲೀಸರು ಯಾರ ಪರವಾಗಿಯೂ ವರ್ತಿಸಿಲ್ಲ. ಯಾವ ಅಚಾತುರ್ಯವಾಗಿಲ್ಲ, ಆರೋಪಿಗಳಿಗೆ ಸಹಾಯ ಮಾಡಿಲ್ಲ. ಇಲ್ಲಿ ಎಲ್ಲವೂ ಕ್ಲಿಯರ್ ಆಗಿದೆ.
ಗ್ಯಾಂಗ್ ರೇಪ್ ಕೇಸ್ ತೆಗೆದುಕೊಂಡಿದ್ದೇವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಎಲ್ಲ 6 ಆರೋಪಿಗಳನ್ನು ಬಂಧಿಸಲಾಗಿದೆ, ಪೊಲೀಸರಿಂದ ಬೇಜವಾಬ್ದಾರಿ ವರ್ತನೆ ಆಗಿಲ್ಲ ಆಗಿಲ್ಲ ಎಂದರು. ಮೈಸೂರಿನಲ್ಲಿ ಇರುವಷ್ಟು ಪೊಲೀಸರನ್ನು ಬೇರೆ ಕಡೆ ನಿಯೋಜಿಸಿಲ್ಲ, ಬೇರೆ ಕಡೆ ಹೋಲಿಸಿದರೆ ಮೈಸೂರಿನಲ್ಲಿ ಜಾಸ್ತಿ ಸಿಬ್ಬಂದಿ ಇದೆ ಎಂದು ಸಿಬ್ಬಂದಿ ಕೊರತೆ ಆರೋಪವನ್ನು ತಳ್ಳಿಹಾಕಿದರು.
ಯುವತಿಯನ್ನು ಸರ್ಕಾರಿ ಆಸ್ಪತ್ರೆ ಸೇರಿಸಿಲ್ಲ, ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಇದರಿಂದ ತನಿಖೆ ತಪ್ಪು ಹಾದಿ ಹಿಡಿಯುತ್ತಿದೆ ಎನ್ನುವ ಅನುಮಾನ ಬೇಡ. ಆರೋಪಿಗಳಿಗೆ ಕ್ರಿಮಿನಲ್ ಹಿನ್ನಲೆ ಇದೆ. ಪ್ಲಾನ್ ಮಾಡಿ ಮಾಡಲು ಅವರು ಸ್ಥಳೀಯರಲ್ಲ, ಆರೋಪಿಗಳು ಮತ್ತು ಸಂತ್ರಸ್ತರು ಇಬ್ಬರೂ ಸ್ಥಳೀಯರಲ್ಲ ಎಲ್ಲ ರೀತಿಯ ಕ್ರಮ ಜರುಗಿಸಲಾಗುತ್ತದೆ. ತನಿಖಾ ಹಂತದಲ್ಲಿರುವಾಗ ಎಲ್ಲ ಮಾಹಿತಿ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ, ತನಿಖೆ ಹಾದಿ ತಪ್ಪಲಿದೆ ಎಂದು ಮಾಧುಸ್ವಾಮಿ ಹೇಳಿದರು.
ನಮ್ಮ ಸರ್ಕಾರ, ಪೊಲೀಸ್ ಇಲಾಖೆ ಗಂಭೀರವಾಗಿದೆ. ಅದಷ್ಟು ಬೇಗ ಮೈಸೂರಿನ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕ್ರಮ ಶ್ಲಾಘನೀಯ, ಯುವತಿ ಕುಟುಂಬ ಸಾಕ್ಷಿಗೆ ಸಿದ್ದ ಇರಲಿಲ್ಲ. ಆದರೂ ಮನವೊಲಿಸಿ ಕರೆ ತಂದು ಕೋರ್ಟ್ ಮುಂದೆ 164 ಹೇಳಿಕೆ ಕೊಡಿಸಲಾಗಿದೆ ಎಂದು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆದಷ್ಟು ಬೇಗ ತುಮಕೂರು ಕೇಸ್ ಪತ್ತೆ:
ತುಮಕೂರು ಘಟನೆಯ ಸ್ಥಳಕ್ಕೆ ನಾನೇ ಹೋಗಿದ್ದೆ. ಗಂಡ ಖಾಸಗಿ ಕಂಪನಿ ಉದ್ಯೋಗಿ, ಮಹಿಳೆ ದನ ಮೇಯಿಸಿಕೊಂಡು ಬರುತ್ತಿದ್ದರು. ಆದರೆ, ಆ ಮಹಿಳೆಯ ಕೊಲೆ ಮಾಡಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾನೆ. ಈಗಾಗಲೇ ಐದು ಟೀಂ ಮಾಡಿ ಆರೋಪಿಗಳ ಹುಡುಕಲಾಗುತ್ತಿದೆ. ಸಣ್ಣ ಸಾಕ್ಷಿಯೂ ಸಿಗುತ್ತಿಲ್ಲ, ಇಲ್ಲಿಯೂ ನಾವು ಅಷ್ಟು ಸುಲಭವಾಗಿ ಬಿಡಲ್ಲ. ಸಣ್ಣ ಪುಟ್ಟ ಸಾಕ್ಷಿ ಹುಡುಕಾಟ ಮಾಡಲಾಗುತ್ತಿದೆ.
ನಮ್ಮ ಎಸ್ಪಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹಳ್ಳಿ ಹಳ್ಳಿಗೂ ತಿರುಗಿ ಹುಡುಕುತ್ತಿದ್ದಾರೆ. ಆರೋಪಿ ಪತ್ತೆಗೆ ವಿಳಂಬವಾಗುತ್ತಿದೆ. ಎಷ್ಟೇ ಕಷ್ಟವಾದರೂ ಬಿಡಲ್ಲ, ಕಾನೂನು ಮುಂದೆ ತಂದು ನಿಲ್ಲಿಸಲಿದ್ದೇವೆ ಎಂದರು.