ಬೆಂಗಳೂರು: 2011ರ ಗೆಜೆಟೆಡ್ ಪ್ರೊಬೇಷನರಿ 362 ಹುದ್ದೆಗಳ ನೇಮಕಾತಿ ವಿವಾದ ಕುರಿತು ರಾಜ್ಯ ಸರ್ಕಾರ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಸ್ವಲ್ಪ ಸಮಯ ಬೇಕಾಗಲಿದ್ದು, ಆದಷ್ಟು ಬೇಗ ಸಮಸ್ಯೆ ಇತ್ಯರ್ಥ ಪಡಿಸಲಾಗುತ್ತದೆ. ಅಂದಿನ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎನ್ನುವ ಪರವಾಗಿಯೇ ಇದ್ದೇವೆ. ಅಗತ್ಯಬಿದ್ದರೆ ಕಾನೂನು ತಿದ್ದುಪಡಿಗೂ ಸಿದ್ದರಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನ ಪರಿಷತ್‌ಗೆ ತಿಳಿಸಿದ್ದಾರೆ.
ನಿಯಮ 330ರ ಅಡಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್ ನಡೆಸಿದ ಚರ್ಚೆಗೆ ಉತ್ತರಿಸಿದ ಸಚಿವರು, 2011ರ ನೇಮಕಾತಿ ವಿಚಾರ ಸಾಕಷ್ಟು ವರ್ಷಗಳಿಂದ ಚರ್ಚೆ ಆಗುತ್ತಿದೆ. ಇದರಲ್ಲಿ ಸಾಕಷ್ಟು ವಿಷಯಗಳಿವೆ. ನೇಮಕಾತಿ ಆದವರು ಅಮಾಯಕರಿದ್ದಾರೆ. ಯಾರಿಗೂ ಅನ್ಯಾಯ ಮಾಡಬೇಕು ಎನ್ನುವುದು ಯಾವ ಪಕ್ಷಕ್ಕೂ ಇಲ್ಲ. ಅಭ್ಯರ್ಥಿಗಳಿಗೆ ಸಹಾಯ ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಇಡೀ ಸದನ ಬೆಂಬಲ ವ್ಯಕ್ತಪಡಿಸಿದೆ. ಮತ್ತೆ ಅಭ್ಯರ್ಥಿಗಳು ಕೋರ್ಟ್ ಮುಂದೆ ನಿಲ್ಲಬಾರದು ಎನ್ನುವುದು ನಮ್ಮ ನಿಲುವು. ಹಾಗಾಗಿ ಯಾವ ವಿಚಾರದಲ್ಲಿ ಮುಂದುವರೆಯಬೇಕು ಎನ್ನುವ ಕುರಿತು ಚರ್ಚಿಸುತ್ತಿದ್ದೇವೆ. ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
'ಎಜಿ, ಕಾನೂನಿನ ತಜ್ಞರ ಜೊತೆ ಸಮಾಲೋಚನೆ'
ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದಿದ್ದೇವೆ. ಅವರು ಕೂಡ ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಕೆಪಿಎಸ್ಸಿ ಸದಸ್ಯರ ಪ್ರಾಸಿಕ್ಯೂಷನ್ ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ಬಿಲ್ ತಂದು ಎನ್ಯಾಕ್ಟ್ ಮಾಡಬೇಕಾ? ಯಾವ ರೀತಿ ಇದನ್ನು ಸರಿಪಡಿಸಬೇಕು ಎನ್ನುವ ಕುರಿತು ಚಿಂತನೆ ನಡೆಸಲಾಗುತ್ತಿದೆ, ಅದೇ ಪಟ್ಟಿಯನ್ನು ಊರ್ಜಿತಗೊಳಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆ ಅಧಿಸೂಚನೆ ಊರ್ಜಿತ ಎಂದು ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇದೆ. ಅದಕ್ಕಾಗಿ ಎಜಿ, ಕಾನೂನಿನ ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದರು.