ಕರ್ನಾಟಕ

karnataka

ETV Bharat / city

ಆದ್ಯತೆಯ ಮೇಲೆ ನೀರಾವರಿ ಇಲಾಖೆ ಬಾಕಿ ಬಿಲ್​ಗಳ ಪಾವತಿ: ಸಚಿವ ಕಾರಜೋಳ - ವಿಧಾನಪರಿಷತ್​ನಲ್ಲಿ ಗೋವಿಂದ ಕಾರಜೋಳ ಮಾತು

ವಿಧಾನ ಪರಿಷತ್​ನಲ್ಲಿ ಜೆಡಿಎಸ್ ಸದಸ್ಯ ಬಿ.ಎಂ. ಫಾರೂಕ್ ಅವರ ಗಮನ ಸೆಳೆಯುವ ಸೂಚನೆಗೆ ಸಚಿವ ಕಾರಜೋಳ ಉತ್ತರಿಸಿದರು.

govinda-karajola
ಗೋವಿಂದ ಕಾರಜೋಳ

By

Published : Mar 7, 2022, 4:56 PM IST

ಬೆಂಗಳೂರು:ಜಲ ಸಂಪನ್ಮೂಲ ಇಲಾಖೆಯ ವಿಶೇಷ ಅಭಿವೃದ್ಧಿ ವಾಹಕಗಳಾಗಿರುವ ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ ಹಾಗೂ ಕಾವೇರಿ ನೀರಾವರಿ ನಿಗಮಗಳ ಕಾಮಗಾರಿಗಳ ಪ್ರಸ್ತುತ ಸಾಲಿನಲ್ಲಿ 10967.47 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ನಾಲ್ಕೂ ನಿಗಮಗಳಿಂದ ಇನ್ನೂ 9998.95 ಕೋಟಿ ರೂಪಾಯಿಗಳ ಪಾವತಿ ಬಾಕಿ ಇದೆ. ನಿಗಮಗಳಲ್ಲಿ ಅನುದಾನದ ಲಭ್ಯತೆ ಮತ್ತು ಆದ್ಯತೆಯ ಮೇಲೆ ಹಣ ಮಂಜೂರು ಮಾಡಲು ಕ್ರಮ ವಹಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ವಿಧಾನ ಪರಿಷತ್​ನಲ್ಲಿ ಜೆಡಿಎಸ್ ಸದಸ್ಯ ಬಿ.ಎಂ. ಫಾರೂಕ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಈ ನಿಗಮಗಳಡಿಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲು 1,00,000 ಕೋಟಿ ರೂಪಾಯಿಗಳನ್ನು ಮುಂದುವರೆದ, ಪೂರ್ಣಗೊಂಡಿರುವ ಕಾಮಗಾರಿಯಡಿಯಲ್ಲಿ ಪಾವತಿಗೆ ಬಾಕಿ ಇರುವ ಮೊತ್ತವನ್ನು ಪಾವತಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಜನವರಿ 2022ರ ಅಂತ್ಯಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದಿಂದ 4165.44 ರೂ., ಕಾವೇರಿ ನೀರಾವರಿ ನಿಗಮದಿಂದ 3,904.54 ರೂ., ವಿಶ್ವೇಶ್ವರಯ್ಯ ಜಲ ನಿಗಮದಿಂದ 1368.45 ರೂ., ಕಾವೇರಿ ನೀರಾವರಿ ನಿಗಮದಿಂದ 1,386.31 ರೂ. ವೆಚ್ಚ ಮಾಡಿದ್ದಾರೆ. ಒಟ್ಟು 10,824.74 ಲಕ್ಷ ರೂ.ಗಳನ್ನು ಪಾವತಿ ಮಾಡಲಾಗಿದೆ ಎಂದು ವಿವರ ಒದಗಿಸಿದರು.

ಬಾಕಿ ಉಳಿದ ನಿಗಮವಾರು ವಿವರಗಳು:ಕೃಷ್ಣಾ ಭಾಗ್ಯ ಜಲ ನಿಗಮ 1,312.40 ರೂಪಾಯಿ ಕರ್ನಾಟಕ ನೀರಾವರಿ ನಿಗಮ 4058.32 ರೂಪಾಯಿ ಕಾವೇರಿ ನೀರಾವರಿ ನಿಗಮ 1,355.16 ರೂ. ಮತ್ತು ವಿಶ್ವೇಶ್ವರಯ್ಯ ಜಲ ನಿಗಮ 3,273.07 ರೂಪಾಯಿ ಬಾಕಿ ಇದೆ ಎಂದರು.

ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಬದ್ಧ:ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ರಾಜ್ಯದ ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳಿಂದ ಎತ್ತಿನಹೊಳೆಯ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಆದಷ್ಟು ಬೇಗ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ರಾಜೇಂದ್ರ ರಾಜಣ್ಣ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಮೊದಲನೇ ಹಂತದ ಲಿಫ್ಟ್ ಕಾಮಗಾರಿಗಳನ್ನು ಒಟ್ಟು 3716.77 ಕೋಟಿ ರೂ. ಮೊತ್ತದಲ್ಲಿ 5 ಪ್ಯಾಕೇಜ್​ಗಳಲ್ಲಿ ಮತ್ತು ಮೊದಲನೇ ಹಂತದ ಕಾಮಗಾರಿಗಳಿಗೆ ಅವಶ್ಯವಿರುವ 219.44 ಮೆಗಾ ವ್ಯಾಟ್​ ವಿದ್ಯುಚ್ಛಕ್ತಿ ಪೂರೈಸುವ ಸಬ್ ಸ್ಟೇಷನ್ ನಿರ್ಮಾಣದ ಕಾಮಗಾರಿ ಮತ್ತು ಟ್ರಾನ್ಸ್ ಮಿಷನ್ ಲೈನ್ ನಿರ್ಮಾಣ ಕಾಮಗಾರಿಗಳನ್ನು ಒಟ್ಟು 398.56 ಕೋಟಿ ರೂ. ಮೊತ್ತದಲ್ಲಿ ಎರಡು ಪ್ಯಾಕೇಜ್​ಗಳಲ್ಲಿ ಕೈಗೆತ್ತಿಕೊಂಡಿದ್ದು, ಮೊದಲನೇ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ. ಶೇ.95ರಷ್ಟು ಪೂರ್ಣಗೊಂಡಿದೆ ಎಂದರು.

260 ಕಿ.ಮೀ. ಗುರುತ್ವ ಕಾಲುವೆ ಶೇ.70 ಪೂರ್ಣ:ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-2 ರಡಿಯ 260 ಕಿ.ಮೀ. ಉದ್ದದ ಗುರುತ್ವ ಕಾಲುವೆ, ಭೈರಗೊಂಡ್ಲು ಜಲಾಶಯದ ಕಾಮಗಾರಿ ಮತ್ತು ಭೈರಗೊಂಡ್ಲು ಜಲಾಶಯದ ವರೆಗಿನ ಫೀಡರ್ ಕಾಲುವೆ ಕಾಮಗಾರಿಗಳನ್ನು ಒಟ್ಟಾರೆ 12,160.69 ಕೋಟಿ ರೂ. ಮೊತ್ತದಲ್ಲಿ 35 ಪ್ಯಾಕೇಜ್​ಗಳಲ್ಲಿ ಕೈಗೆತ್ತಿಕೊಂಡಿದ್ದು, ಈಗಾಗಲೇ ಗುರುತ್ವ ಕಾಲುವೆಯ ಕಾಮಗಾರಿಯು ಶೇ.70ರಷ್ಟು ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು.

ಟಿ.ಜಿ.ಹಳ್ಳಿ ಜಲಾಶಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಹಾಗೂ ನೆಲಮಂಗಲ ತಾಲ್ಲೂಕಿನ 2 ಕೆರೆಗಳನ್ನು ತುಂಬಿಸುವ ರೂ.1325.96 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ಟಿ.ಜಿ.ಹಳ್ಳಿ ರಾಮನಗರ ಫೀಡರ್ ಕಾಲುವೆಯ ಒಟ್ಟು 52.89 ಕಿ.ಮೀ. ಉದ್ದದ ಪೈಕಿ, 36.00 ಕಿಮೀ. ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ.

ಕೆರೆಗಳಿಗೆ ನೀರು ತುಂಬುವ ಫೀಡರ್​ ಕಾಲುವೆ:ತುಮಕೂರು, ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ತಾಲ್ಲೂಕುಗಳಿಗೆ ಕುಡಿಯುವ ನೀರು ಮತ್ತು ಈ ಭಾಗದ 79 ಸಣ್ಣ ನೀರಾವರಿ ಕೆರೆಗಳಿಗೆ ನೀರನ್ನು ಒದಗಿಸುವ 1361.95 ಕೋಟಿ ರೂ. ಮೊತ್ತದ ಮಧುಗಿರಿ ಫೀಡರ್ ಕಾಲುವೆ ಕಾಮಗಾರಿ (2 ಪ್ಯಾಕೇಜ್​ಗಳಲ್ಲಿ) ಕೈಗೊಳ್ಳಲಾಗಿದೆ. ಸದರಿ ಫೀಡರ್ ಕಾಲುವೆಯ ಒಟ್ಟು ಉದ್ದ 120.48 ಕಿ.ಮೀ. ಇದ್ದು, ಇದರಲ್ಲಿ 78.00 ಕಿ.ಮೀ. ಉದ್ದದ ಪೈಕಿ, 63.00 ಕಿಮೀ. ಉದ್ದಕ್ಕೆ ಪೈಪ್ ಲೈನ್ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಗೌರಿಬಿದನೂರು ತಾಲ್ಲೂಕಿಗೆ ಕುಡಿಯುವ ನೀರಿಗಾಗಿ ಮತ್ತು ಗೌರಿಬಿದನೂರು, ಕೊರಟಗೆರೆ, ಮಧುಗಿರಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳ 107 ಸಣ್ಣ ನೀರಾವರಿ ಕೆರೆಗಳಿಗೆ ನೀರನ್ನು ಒದಗಿಸುವ ರೂ.863.48 ಕೋಟಿ ಮೊತ್ತದ ಗೌರಿಬಿದನೂರು ಫೀಡರ್ ಕಾಲುವೆ ಕಾಮಗಾರಿಯ ಒಟ್ಟು 81.60 ಕಿ.ಮೀ. ಉದ್ದದ ಪೈಕಿ, 63.00 ಕಿ,ಮೀ. ಉದ್ದದ ಪೈಪ್ ಲೈನ್ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.

ಗುರುತ್ವ ಕಾಲುವೆ ಕೊನೆಯಲ್ಲಿ ಬರುವ ಕೊರಟಗೆರೆ ತಾಲ್ಲೂಕು ಭೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ವಹಿಸಲಾಗಿದ್ದು, ಗುತ್ತಿಗೆದಾರರು ಕಾಮಗಾರಿಯನ್ನು ಪ್ರಾರಂಭಿಸಲು ಪೂರ್ವಸಿದ್ಧತಾ ಕೆಲಸ ಕಾರ್ಯಗಳನ್ನು ಕೈಗೊಂಡಾಗ ಕೊರಟಗೆರೆ ತಾಲೂಕಿನ ರೈತರು ದೊಡ್ಡಬಳ್ಳಾಪುರ ತಾಲೂಕಿನ ಭೂಸ್ವಾಧೀನ ದರಗಳಂತೆಯೇ, ಏಕರೂಪ ದರ ನೀಡಲು ಒತ್ತಾಯಿಸಿದ್ದರಿಂದ ಕಾಮಗಾರಿ ಪ್ರಾರಂಭಿಸುವಲ್ಲಿ ಅಡೆತಡೆ ಉಂಟಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಪರಿಷತ್ತಿನಲ್ಲಿ ತಿಳಿಸಿದರು.

ಇದನ್ನೂ ಓದಿ:ನಾವು ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ: ಹೆಚ್​ಡಿಕೆ

ABOUT THE AUTHOR

...view details