ಬೆಂಗಳೂರು:ಮನೆಯಲ್ಲಿ ಮಕ್ಕಳಿಗೆ ಬೇಸರವಾಗೋದು ಸ್ವಾಭಾವಿಕ. ಆಗ ಅವರನ್ನು ಅಪ್ಪ, ಅಮ್ಮ ಸುಧಾರಿಸ್ತಾರೆ. ನಮ್ಮದು ಹೇಳೋರು, ಕೇಳೋರು ಇರೋ ಪಕ್ಷ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಪಕ್ಷದಲ್ಲಿನ ಅಸಮಾಧಾನ ಬಗ್ಗೆ ಪ್ರತಿಕ್ರಿಯಿಸುತ್ತಾ ಮಾತನಾಡಿದ ಈಶ್ವರಪ್ಪ, ಹಲವರು ತ್ಯಾಗ ಮಾಡಿ ಪಕ್ಷಕ್ಕೆ ಬಂದಿದ್ದಾರೆ. ಅವರು ಇಲ್ಲದಿದ್ದರೆ ನಮಗೆ ಸರ್ಕಾರ ರಚಿಸುವ ಅವಕಾಶ ಸಿಗುತ್ತಿರಲಿಲ್ಲ. 104 ಮಂದಿಯ ತ್ಯಾಗದಿಂದ ನಾವು ಸಚಿವರಾಗಿದ್ದೇವೆ ಎಂಬುದು ಮುನಿರತ್ನ ಅವರ ದೊಡ್ಡ ಮಾತು ಎಂದರು.
ಚುನಾವಣೆಯಲ್ಲಿ 104 ಸ್ಥಾನ ಗೆಲ್ಲಲು ತರಲು ಎಲ್ಲರೂ ಪ್ರಯತ್ನ ಮಾಡಿದ್ದಾರೆ. ಈ ಸಮಾಜದಲ್ಲಿ ಕೆಲವು ಖಾತೆ ಪ್ರಭಾವಿ, ಕೆಲವು ಖಾತೆ ಪ್ರಭಾವಿ ಅಲ್ಲ ಎಂಬ ಮಾತು ಬಂದುಬಿಟ್ಟಿದೆ. ಅಲ್ಲೊಬ್ಬರು, ಇಲ್ಲೊಬ್ಬರಿಗೆ ಬೇಸರ ಆಗುವುದು ಸಹಜ, ಅದನ್ನು ಸರಿಪಡಿಸ್ತೇವೆ ಎಂದರು.
ಹಿಂದುಳಿದ ವರ್ಗದ ಪಟ್ಟಿ ರಚನೆಗೆ ರಾಜ್ಯಕ್ಕೆ ಅಧಿಕಾರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆಯಾಯ ರಾಜ್ಯಗಳಿಗೆ ಕೊಟ್ಟ ಅವಕಾಶವನ್ನು ಸಂತೋಷದಿಂದ ಸ್ವಾಗತ ಮಾಡುತ್ತೇನೆ. ಹಿಂದುಳಿದ ವರ್ಗಕ್ಕೆ ಬಿಜೆಪಿ ಸಾಕಷ್ಟು ಅವಕಾಶ ನೀಡಿದೆ. ಮೆಡಿಕಲ್ ಸೀಟುಗಳಲ್ಲಿ ಶೇಕಡಾ 27ರಷ್ಟು ಮೀಸಲಾತಿ ನೀಡಲಾಗಿದೆ. ಮಲ್ಲಿಕಾರ್ಜುನ ಖರ್ಗೆಯಂಥವರು ಯಾವುದೇ ರಾಜಕೀಯ ಮಾಡದೇ ಅದನ್ನು ಸ್ವಾಗತ ಮಾಡಿದ್ದಾರೆ. ಕಾಂಗ್ರೆಸ್ ಕೇವಲ ಮಾತಿನಲ್ಲಿ ಹೇಳುತ್ತಿತ್ತು. ಆದರೆ ಬಿಜೆಪಿ ಅದನ್ನು ಮಾಡಿ ತೋರಿಸಿದೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ನಿಮ್ಮ ಹೆಸರು 'ನೀರಜ್' ಆಗಿದ್ರೆ ಈ ಬಂಕ್‌ನಲ್ಲಿ 501 ರೂಪಾಯಿಯ ಪೆಟ್ರೋಲ್ ಉಚಿತ!