ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಕೋರೊನಾ ಸವಾಲನ್ನು ಅತ್ಯಂತ ಸಮರ್ಥವಾಗಿ ಎದುರಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದ್ದಾರೆ.
ಹೊಸ ವರ್ಷದ ಸಂದರ್ಭದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಸಚಿವರು, 2021ರಲ್ಲಿ ಕೊರೊನಾ ವೈರಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನಾವೆಲ್ಲ ದೃಢ ಸಂಕಲ್ಪ ಮಾಡೋಣ ಎಂದಿದ್ದಾರೆ. ಜೊತೆಗೆ ಕೊರೊನಾದಿಂದಾಗಿ ಭಾರತವು ಎದುರಿಸಿದ ಸವಾಲುಗಳನ್ನು ನೆನಪಿಸಿಕೊಂಡು ಭಾರತ ಸರ್ಕಾರ ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.
ಕೊರೊನಾ ಆರಂಭಕ್ಕೂ ಮುನ್ನ ಭಾರತದಲ್ಲಿ ಪಿಪಿಇ ಕಿಟ್ಗಳು, ವೆಂಟಿಲೇಟರ್ಗಳು ತಯಾರಾಗುತ್ತಿರಲಿಲ್ಲ. ಆದರೆ, ಇಂದು ಪ್ರತಿನಿತ್ಯ 4 ಲಕ್ಷ ಪಿಪಿಇ ಕಿಟ್ಗಳನ್ನು ತಯಾರಿಸುತ್ತಿದ್ದೇವೆ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್ಗಳ ಉತ್ಪಾದನೆ ಆರಂಭಗೊಂಡಿದೆ. ವೈದ್ಯಕೀಯ ಉಪಕರಣಗಳ ಸ್ವಾವಲಂಬನೆಗೆ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ನಾವು ಜಗತ್ತಿನ 120 ದೇಶಗಳಿಗೆ ಜೀವರಕ್ಷಕ ಔಷಧವನ್ನು ಕಳುಹಿಸಿಕೊಟ್ಟೆವು. ಭಾರತದ ಈ ನೆರವನ್ನು ಇಡೀ ವಿಶ್ವವೇ ಕೊಂಡಾಡಿತು ಎಂದು ಹೇಳಿದರು.
ಭಾರತ ಇದೀಗ ಜಗತ್ತಿನ ಪ್ರಮುಖ ಔಷಧಿ ರಫ್ತುದಾರ ರಾಷ್ಟ್ರ. ಆದರೆ, ನಾವು ಇನ್ನೂ ಕೂಡ ಕೆಲ ರಾಸಾಯನಿಕಗಳಿಗಾಗಿ ಚೀನಾ ಸೇರಿದಂತೆ ಮುಂತಾದ ದೇಶಗಳನ್ನು ಮೇಲೆ ಅವಲಂಬಿಸಿದ್ದೇವೆ. ಇವನ್ನು ಕೂಡ ಸ್ವದೇಶಿಯವಾಗಿ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ. ಅಂದಾಜು 14,300 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಮೂರು ಕಡೆ ಬಲ್ಕ್ ಡ್ರಗ್ ಪಾರ್ಕ್ ಹಾಗೂ ನಾಲ್ಕು ಮೆಡಿಕಲ್ ಡಿವೈಸ್ ಪಾರ್ಕ್ಗಳನ್ನು ರಾಸಾಯನಿಕ ಇಲಾಖೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಭಾರತವನ್ನು ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬಿ ಮಾಡಲು ರಸಗೊಬ್ಬರ ಇಲಾಖೆ ಸಹ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿದೆ. 50 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಯೂರಿಯಾ ಉತ್ಪಾದನಾ ಘಟಕಗಳನ್ನು ಮರು ಅಭಿವೃದ್ಧಿ ಮಾಡಲಾಗುತ್ತಿದೆ. ಇವು ವಾರ್ಷಿಕವಾಗಿ ತಲಾ 12 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯ ಘಟಕಗಳು. ರಾಮಗುಂಡಂ ಕಾರ್ಖಾನೆಯ ಕೆಲಸ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಉತ್ಪಾದನೆ ಆರಂಭಿಸಲಿದೆ ಎಂದು ಸಚಿವರು ತಿಳಿಸಿದರು.
ಕೊರೊನಾದಿಂದ ನಾವು ಹೊಸಪಾಠಗಳನ್ನು ಕಲಿಯುತ್ತಿದ್ದೇವೆ. ಲಸಿಕೆ ದೊರೆಯುತ್ತಿದ್ದಂತೆ ಸರ್ಕಾರವು ಅದನ್ನು ಪ್ರತಿಯೊಬ್ಬರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತದೆ. ಕೊರೊನಾ ವೈರಾಣು ಇನ್ನೂ ವ್ಯಾಪಕವಾಗಿಯೇ ಇದೆ. ಹಾಗಾಗಿ ನಾವೆಲ್ಲ ಅದರ ಬಗ್ಗೆ ಮುಂಜಾಗ್ರತೆಯಿಂದ ಇರಬೇಕು. ಮಾಸ್ಕ್ ಧಾರಣೆ, ದೈಹಿಕ ಅಂತರ ಕಾಪಾಡಿಕೊಳ್ಳುವುದು ಇವೇ ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಬೇಕು. 2021ರಲ್ಲಿ ಕೊರೊನಾ ಸಂಪೂರ್ಣ ನಿರ್ಮೂಲನೆ ಮಾಡಲು ನಾವೆಲ್ಲ ಪಣತೊಡೋಣ ಎಂದು ಸಚಿವರು ತಿಳಿಸಿದರು.