ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆ ಆಗ್ತಿದೆ. ಈ ನಿಟ್ಟಿನಲ್ಲಿ ಹಂತಹಂತವಾಗಿ ಪೂರ್ಣ ಪ್ರಮಾಣದಲ್ಲಿ ಶೈಕ್ಷಣಿಕ ವರ್ಷವನ್ನೂ ಆರಂಭಿಸಲಾಗಿದೆ. ಈ ಮಧ್ಯೆ ಹಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೆಟ್ಟು ಹಾಕುತ್ತಿದ್ದು, ವ್ಯಾಕ್ಸಿನೇಷನ್ ಬಂದ ನಂತರವಷ್ಟೇ ಶಾಲೆಗೆ ಕಳುಹಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಮಕ್ಕಳ ವ್ಯಾಕ್ಸಿನ್ ಯಾವಾಗ ಬರಲಿದೆ ಎಂಬ ಬಗ್ಗೆ ಆರೋಗ್ಯ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಮಕ್ಕಳಿಗೆ ಕೋವಿಡ್ ಲಸಿಕೆ ಯಾವಾಗ? ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಿಷ್ಟು..
ಕೇಂದ್ರ ಸರ್ಕಾರ ಒಂದು ಕೋಟಿ ಜೈಡಸ್ ಲಸಿಕೆಗೆ (Zydus Cadila vaccine) ಬೇಡಿಕೆ ಇಟ್ಟಿದ್ದು, ಅಲ್ಲಿಂದ ಯಾವ್ಯಾವ ರಾಜ್ಯಕ್ಕೆ ಎಷ್ಟು ಡೋಸ್ ವಿತರಣೆ ಮಾಡಬೇಕೆಂದು ತೀರ್ಮಾನವಾಗಲಿದೆ. ಅದಕ್ಕೆ ಅನುಗುಣವಾಗಿ ನಾವು ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳಬೇಕು, ಯಾರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದರ ಕುರಿತು ಯೋಜನೆ ರೂಪಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಒಂದು ಕೋಟಿ ಜೈಡಸ್ ಲಸಿಕೆಗೆ ಬೇಡಿಕೆ ಇಟ್ಟಿದೆ. ಅಲ್ಲಿಂದ ಯಾವ್ಯಾವ ರಾಜ್ಯಕ್ಕೆ ಎಷ್ಟು ಡೋಸ್ ವಿತರಣೆ ಮಾಡಬೇಕೆಂದು ತೀರ್ಮಾನ ಮಾಡ್ತಾರೆ. ಅದರ ಅನುಗುಣವಾಗಿ ನಾವು ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳಬೇಕು, ಯಾರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದರ ಕುರಿತು ಯೋಜನೆ ರೂಪಿಸುತ್ತಿದ್ದೇವೆ ಎಂದರು.
ಆರೋಗ್ಯ ನಂದನ ಕಾರ್ಯಕ್ರಮದಡಿ ದತ್ತಾಂಶ ಸಂಗ್ರಹವಾಗಿದೆ. ಮುಂದಿನ ವಾರದ ಹೊತ್ತಿಗೆ ಲಸಿಕೆ ಬರುವ ಸಾಧ್ಯತೆ ಇದೆ. ಆದ್ರೆ ಎಷ್ಟು ಡೋಸ್ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಅದರ ಆಧಾರದ ಮೇರೆಗೆ ಲಸಿಕೆಯನ್ನು ನೀಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತೇವೆ ಎಂದು ಸಚಿವರು ಹೇಳಿದರು.