ಕರ್ನಾಟಕ

karnataka

ETV Bharat / city

'ನಾನು ಡಾಕ್ಟರ್ ಆಗಲೇಬೇಕು ಸರ್.. ನಮ್ಗೆ ಬೇರೆ ದಾರಿ ಇಲ್ಲ, ನೀವು ತೋರಿಸಿದ ಹಾದಿಯಲ್ಲಿ ನಡೆಯುತ್ತೇವೆ' - ವಿಧಾನಸೌಧದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸಚಿವ ಡಾ.ಕೆ.ಸುಧಾಕರ್ ಸಭೆ

ಯುದ್ಧ ಪೀಡಿತ ಉಕ್ರೇನ್​​ನಿಂದ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳ ಜತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಇಂದು ವಿಧಾನಸೌಧದಲ್ಲಿ ಸಭೆ ನಡೆಸಿದರು.

Minister Dr K Sudhakar held a meeting with medical students
ವಿಧಾನಸೌಧದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸಚಿವ ಡಾ.ಕೆ.ಸುಧಾಕರ್ ಸಭೆ

By

Published : Mar 21, 2022, 7:23 PM IST

ಬೆಂಗಳೂರು: ನಾನು ಡಾಕ್ಟರ್ ಆಗಲೇಬೇಕು ಸರ್. ಅದಕ್ಕೆ ನಾನು ಉಕ್ರೇನ್​​ಗೆ ಹೋಗಿದ್ದು. ನಾನು ಒಬ್ಬಳೇ ಹೆಣ್ಣು ಮಗಳು ಸರ್.. ನಮಗೆ ಬೇರೆ ದಾರಿ ಇಲ್ಲ. ನೀವು ನಮಗೆ ದಾರಿ ತೋರಿಸಿ, ಅಲ್ಲಿ ನಡೆಯುತ್ತೇವೆ... ಹೀಗೆ ಆರೋಗ್ಯ ಸಚಿವರ ಮುಂದೆ ಅಳಲು ತೋಡಿಕೊಂಡಿದ್ದು, ಉಕ್ರೇನ್​​ನಿಂದ ವಾಪಸ್​​ ಆದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಪೋಷಕರು.

ವಿಧಾನಸೌಧದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸಚಿವ ಡಾ.ಕೆ.ಸುಧಾಕರ್ ಸಭೆ

ಯುದ್ಧ ಪೀಡಿತ ಉಕ್ರೇನ್​​ನಿಂದ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳ ಜತೆ ಸಚಿವ ಡಾ. ಕೆ.ಸುಧಾಕರ್ ಇಂದು ವಿಧಾನಸೌಧದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸಲಹೆ, ಅಭಿಪ್ರಾಯ, ಅಹವಾಲುಗಳನ್ನು ಸಚಿವರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಹಂಚಿಕೊಂಡರು.

ಈ ವೇಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕಲಿಕೆ ಮುಂದುವರಿಸಲು ತಮಗೆ ಅವಕಾಶ ಮಾಡಿಕೊಡುವಂತೆ ಪರಿ-ಪರಿಯಾಗಿ ಮನವಿ ಮಾಡಿದರು. ಉಕ್ರೇನ್​​ನಿಂದ ಮರಳಿದ ಬೆಂಗಳೂರಿನ ವಿದ್ಯಾರ್ಥಿನಿ ಸ್ನೇಹ ಮಾತನಾಡಿ, ನಾನು ಡಾಕ್ಟರ್ ಆಗಲೇಬೇಕು ಸರ್. ಅದಕ್ಕೆ ನಾನು ಉಕ್ರೇನ್ ಗೆ ಹೋಗಿದ್ದು. ನಾನು ಐದು ವರ್ಷ ಪೂರೈಸಿದ್ದೇನೆ. ಇನ್ನು ಒಂದು ವರ್ಷ ಕೋರ್ಸ್​ ಮುಗಿಸಲು ಅವಕಾಶ ಮಾಡಿಕೊಡಿ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು.

ಇತ್ತ ವಿದ್ಯಾರ್ಥಿಗಳ ಪೋಷಕರು ಸಹ ಸಚಿವರ ಮುಂದೆ ತಮ್ಮ ಮನವಿ ಮಾಡಿದರು. ಯಾರದ್ದೋ ತುತ್ತು ನಾವು ಕಿತ್ತುಕೊಳ್ಳಬೇಕು ಅಂತಾ ಇಲ್ಲ ಸರ್. ನಮಗೆ ಓದಲು ಅವಕಾಶ ಕೊಡಿ ಎಂದು ಮತ್ತೋರ್ವ ವಿದ್ಯಾರ್ಥಿನಿ ಮನವಿ ಮಾಡಿದರು.

ಭಾರತ ಸರ್ಕಾರದ ಪ್ರಕಾರ ನಾವು ಅಭ್ಯಾಸ ಮಾಡಿದ್ದೇವೆ. ನೀವು ನಿಮ್ಮ ಅಧಿಕಾರಿಗಳ ಜತೆಗೆ ಚರ್ಚೆ ಮಾಡಿ ಅವಕಾಶ ಕೊಡಿಸಿ. ಅಲ್ಲಿನ ಟೀಚರ್ಸ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಬೆಳಗಾವಿ ವಿದ್ಯಾರ್ಥಿ ಪ್ರಜ್ವಲ್ ತಿಳಿಸಿದರು.

ಮೈಸೂರು ಮೂಲದ ವಿದ್ಯಾರ್ಥಿ ಅನಿಲ್ ಕುಮಾರ್ ಮಾತನಾಡುತ್ತಾ, ನಮಗೆ ಅಲ್ಲಿ ಆರು ವರ್ಷದ ಕೋರ್ಸ್ ಇತ್ತು. ನನ್ನದು ಐದು ವರ್ಷ ಮುಗಿದಿದೆ. ನನಗೆ ಇಲ್ಲಿ ಅವಕಾಶ ಕೊಡಿ‌. ಅಲ್ಲಿ ಆನ್​​ಲೈನ್ ನಲ್ಲಿ ಕ್ಲಾಸ್​​ ಮಾಡುತ್ತೇವೆ ಎನ್ನುತ್ತಿದ್ದಾರೆ.

ಎಷ್ಟೋ ಮಂದಿ ಶಿಕ್ಷಕರು ಸಾವನ್ನಪ್ಪಿದ್ದಾರೆ. ಕೆಲವರು ಉಕ್ರೇನ್ ಸರ್ಕಾರ ಸಹಾಯ ಮಾಡುತ್ತಿಲ್ಲ ಅಂತಾ ಸ್ಟೇಟಸ್ ಹಾಕಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ನಮಗೆ ಸಹಾಯ ಮಾಡಬೇಕು. ನಮಗೆ ಇಲ್ಲಿ ಇಂಟರ್ನ್ ಶಿಪ್ ಮಾಡುವುದಕ್ಕೆ ಅವಕಾಶ ಕೊಡಿ. ಎಕ್ಸಾಂ ಕೊಡಿ, ಇಲ್ಲಿ ಪಾಸ್ ಮಾಡುತ್ತೇವೆ ಎಂದು ಮನವಿ ಮಾಡಿದರು.

ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳಲು ಆಗಲ್ಲ: ಬೆಂಗಳೂರಿನ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಮಾತನಾಡುತ್ತಾ, ನಾವು ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳಲು ಆಗಲ್ಲ ಸರ್. ಟೀಚರ್​​ಗಳೇ ಬಂಕರ್​​ನಲ್ಲಿ ಕುಳಿತಿದ್ದಾರೆ. ಆನ್ ಲೈನ್ ಕ್ಲಾಸ್ ಮಾಡಿದ್ರು ನಮಗೆ ಎಷ್ಟು ಅರ್ಥ ಆಗುತ್ತೆ?. ನಾವು ಮತ್ತೆ ಅಲ್ಲಿಗೆ ತೆರಳಿದರೂ, ನಮಗೆ ಕ್ಲಾಸ್ ಮತ್ತೆ ಹಾಗೆ ಸಿಗಲ್ಲ ಎಂದರು.

ನಮ್ಮ ಟೀಚರ್ಸ್ ಸೈರನ್ ಬರ್ತಿದೆ ಬರುತ್ತೇವೆ ಇರಿ ಎಂದು ಎದ್ದು ಹೋಗುತ್ತಾರೆ. ಇದರ ನಡುವೆ ನಮಗೆ ಕ್ಲಾಸ್ ಸರಿಯಾಗಿ ಆಗುತ್ತಿಲ್ಲ. ದಯವಿಟ್ಟು ನಮ್ಮನ್ನು ಆದಷ್ಟು ಬೇಗ ಇಲ್ಲಿಯೇ ಅಕಾಡೆಮಿಕ್ ವ್ಯವಸ್ಥೆ​ ಮಾಡಿ ಎಂದರು. ಖಾರ್ಕಿವ್​​ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮಾತನಾಡುತ್ತಾ, ನಮಗೆ ಆನ್​ಲೈನ್ ನಲ್ಲಿ ಪ್ರಾಕ್ಟಿಕಲ್ ತುಂಬಾ ಕಷ್ಟ. ಇಲ್ಲೇ ಅವಕಾಶ ಕೊಡಿ ಎಂದು ಬೇಡಿಕೊಂಡರು.

ಅಲ್ಲಿ ಹೋಗಲು ಕಾರಣ ಏನು?: ಸಭೆಯಲ್ಲಿ ನಾನು ಕುತೂಹಲಕ್ಕೆ ಕೇಳುತ್ತೇನೆ. ನೀವು ಅಲ್ಲಿಗೆ ಓದಲು ಹೋಗಿದ್ದು, ಏಕೆ? ಎಂದು ಸಚಿವ ಸುಧಾಕರ್ ಪ್ರಶ್ನಿಸುತ್ತಾರೆ. ಆಗ ಶೀತಲ್ ಎಂಬ ವಿದ್ಯಾರ್ಥಿನಿ ಉತ್ತರಿಸುತ್ತಾ, ಆರು ವರ್ಷಗಳಿಗೆ ನಮಗೆ ಅಲ್ಲಿ ಸುಮಾರು 40 ಲಕ್ಷ ರೂ.ಖರ್ಚಾಗುತ್ತದೆ. ಇಲ್ಲಿ ಅದಕ್ಕಿಂತ ಹೆಚ್ಚು ಹಣ ಖರ್ಚಾಗುತ್ತದೆ ಎಂದು ವಿವರಿಸಿದರು.

ಆಗ ಸಚಿವ ಸುಧಾಕರ್, ನಮ್ಮಲ್ಲಿ ಮ್ಯಾನೇಜ್ಮೆಂಟ್ ಕೋಟಾ ಹೆಚ್ಚು ಹಣ ಇದೆ ಅಲ್ವಾ?. ಸರ್ಕಾರಿ ಕೋಟಾದಲ್ಲಿ ಯಾರಿಗೂ ಸಿಕ್ಕಿಲ್ಲ ಅಲ್ವಾ?. ಹೈಯರ್ ಫೀಸ್ ಖಾಸಗಿ ಕಾಲೇಜಿನಲ್ಲಿ 9 ಲಕ್ಷ ಆಗುತ್ತದೆ. ಇಲ್ಲಿ ಸಿಗದವರು ಅಲ್ಲಿಗೆ ಹೋಗುತ್ತೀರಿ ಅಲ್ವಾ?. ಅಲ್ಲಿನ ಕಾಲೇಜಿಗೂ, ಇಲ್ಲಿನ ವ್ಯವಸ್ಥೆಗೂ ಏನಾದ್ರು ವ್ಯತ್ಯಾಸ ಇದ್ಯಾ?. ಯಾಕೆಂದರೆ ಇಲ್ಲಿ ಖಾಸಗಿ ಮೆಡಿಕಲ್ ಕಾಲೇಜ್​​ನವರು ಹೂಡಿಕೆ ಮಾಡಿರುತ್ತಾರೆ. ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲು ನಮಗೆ 600 ಕೋಟಿ ರೂ. ಬೇಕು. 100 ಕೋಟಿ ನಿರ್ವಹಣೆಗೆ ಬೇಕು ಎಂದು ವಿವರಿಸಿದರು.

ಆಗ ವಿಧ್ಯಾರ್ಥಿಗಳು ಪ್ರತಿಕ್ರಿಯಿಸಿ ಖಂಡಿತವಾಗಿ ಅಲ್ಲಿಯೂ ಚೆನ್ನಾಗಿದೆ. ಅಲ್ಲಿ WHO ಮಾದರಿಯಲ್ಲಿ ಇದೆ. ಕ್ಯಾಂಪಸ್, ವಸತಿ ಎಲ್ಲಾ ಒಂದೇ ಇದೆ. ವರ್ಲ್ಡ್ ವೈಡ್ ಮಾನ್ಯತೆ ಆಗಿರುವ ಕಾಲೇಜಿನಲ್ಲಿ ನಾವು ಸೇರಿರುವುದು. ಅಲ್ಲಿ ಫೇಲ್ ಆಗಿರುವವರು ಬೇರೆ ಬೇರೆ ದೇಶಕ್ಕೆ ಹೋಗುತ್ತಾರೆ‌. ನಾಲೆಡ್ಜ್ ಅಸೆಸ್ ಮಾಡುವುದಕ್ಕೆ ತುಂಬಾ ವ್ಯವಸ್ಥೆ ಇದೆ. ಆಸ್ಕಿ​ ಸ್ಟೇಜ್ ಅಂತಾ ಪರೀಕ್ಷೆ ಮಾಡುತ್ತಿದ್ದಾರೆ. ಇದರಲ್ಲಿ ಪ್ರಾಕ್ಟಿಕಲ್ ಹೆಚ್ಚು ಇರುತ್ತದೆ‌‌. ಮಾಡ್ಯುಲ್ ಪ್ರಾಕ್ಟೀಸ್ ಇರುತ್ತದೆ ಎಂದು ವಿವರಿಸಿದರು.

ತುಂಬಾ ಸವಾಲಿದೆ, ಆದರೆ ಬಗೆಹರಿಸುತ್ತೇವೆ:ಮೂರ್ನಾಲ್ಕು ವಾರ ಬೇಕು ಎಲ್ಲಾ ಸರಿ ಹೋಗುವುದಕ್ಕೆ. ನಾವು, ಸಿಎಂ ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಆರೋಗ್ಯ ಸಚಿವರ ಜತೆಗೆ ಚರ್ಚೆ ಮಾಡುತ್ತೇವೆ. ನೀವು ಸುರಕ್ಷಿತವಾಗಿ ಬಂದಿರುವುದು ತುಂಬಾ ಮುಖ್ಯ. ನಮ್ಮ ವಿದ್ಯಾರ್ಥಿಗಳನ್ನು ನಾವು ಕಾಪಾಡಬೇಕು ಎಂದು ಸಚಿವ ಸುಧಾಕರ್ ಅಭಯ ನೀಡಿದರು.

ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳಿವೆ. ಅಷ್ಟರಲ್ಲಿ ಹೇಗೆ ಅಕಾಮೊಡೇಟ್ ಮಾಡುವುದು ಹೇಗೆ ಎಂದು ಪ್ಲಾನ್ ಮಾಡಬೇಕು. ಎನ್ಎಂಸಿ ರೂಲ್ಸ್ ಕೂಡ ಮುಖ್ಯ. ಅದನ್ನು ನಾವು ಅನುಸರಿಸಬೇಕು. ಕಾಶ್ಮೀರ್ ನಿಂದ ಕನ್ಯಾಕುಮಾರಿವರೆಗೂ ಒಂದೇ ರೀತಿಯ ಮೆಡಿಕಲ್ ಎಜುಕೇಶನ್ ನೀಡಬೇಕು ಎನ್ನುವುದು ಇದರ ಉದ್ದೇಶ.

ಇದು ರಾಜ್ಯ ಸರ್ಕಾರದ ಅಡಿಯಲ್ಲಿ ಬರಲ್ಲ. ನ್ಯಾಷನಲ್ ಮೆಡಿಕಲ್ ಕಾಲೇಜು ಅಡಿಯಲ್ಲಿ ತೆಗೆದುಕೊಳ್ಳಬೇಕು. ಈಗ ನಿಮಗೆ ಅವಕಾಶ ನೀಡಿದರೆ, ಇಲ್ಲಿಯೇ ಮ್ಯಾನೇಜ್ಮೆಂಟ್ ಸೀಟ್ ತೆಗೆದುಕೊಂಡವರು ಪ್ರಶ್ನೆ ಮಾಡುತ್ತಾರೆ. ಜತೆಗೆ ಬೇರೆ ದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬಂದು ನಮಗೂ ಸೀಟ್ ಕೊಡಿ ಎಂದು ಕೇಳಬಹುದು. ತುಂಬಾ ಸವಾಲು ಇದೆ. ರಾಜ್ಯ, ಕೇಂದ್ರ ಸರ್ಕಾರ ಇದನ್ನು ಖಂಡಿತವಾಗಿ ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದು ಸಚಿವ ಸುಧಾಕರ್​​ ಭರವಸೆ ನೀಡಿದರು.

ಇದನ್ನೂ ಓದಿ:'ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿಗಳ ಕಲಿಕೆಗೆ ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ಅವಕಾಶ'

For All Latest Updates

TAGGED:

ABOUT THE AUTHOR

...view details