ಬೆಂಗಳೂರು :ಕೋವಿಡ್ ಲಾಕ್ಡೌನ್ನಿಂದ ಮುಚ್ಚಲ್ಪಟ್ಟಿರುವ ಪ್ರವಾಸೋದ್ಯಮ ಕ್ಷೇತ್ರಗಳನ್ನು ಮುಂದಿನವಾರದಿಂದ ತೆರೆಯಲಾಗುವುದೆಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ ಪಿ ಯೋಗೇಶ್ವರ್ ತಿಳಿಸಿದ್ದಾರೆ.
ಓದಿ: Murder Video: ರೇಖಾ ಕದಿರೇಶ್ ಹತ್ಯೆಯ ಭೀಕರ ವಿಡಿಯೋ ವೈರಲ್
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಮಗಳನ್ನು ಅಳವಡಿಸಿಕೊಂಡು ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡಲಾಗುವುದು. ಜಂಗಲ್ ಲಾಡ್ಜ್, ಪ್ರವಾಸಿ ತಾಣಗಳನ್ನು ಒಪನ್ ಮಾಡುತ್ತೇವೆ ಎಂದರು.
ಜೋಗ ಜಲಪಾತಕ್ಕೆ 35 ಕಿ.ಮೀ. ಉದ್ದದ ಜಲಮಾರ್ಗ:
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ರೂ.185.00 ಕೋಟಿ ವೆಚ್ಚದಲ್ಲಿ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲು ಟೆಂಡರ್ ಅಂತಿಮವಾಗಿದೆ. ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸಂಸ್ಥೆಯಿಂದ ಈ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೇರಳ ಹಾಗೂ ಗೋವಾ ರಾಜ್ಯಗಳಿಂದ ಜೋಗ ಜಲಪಾತಕ್ಕೆ 35 ಕಿ.ಮೀ ಉದ್ದದ ಜಲಮಾರ್ಗದಲ್ಲಿ ಪ್ರವಾಸಿಗರು ಆಗಮಿಸಲು ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ರಜಾ ದಿನಗಳಂದು ಲಿಂಗನಮಕ್ಕಿ ಜಲಾಶಯದಿಂದ ಪ್ರಥಮ ಹಂತವಾಗಿ 200 ಕ್ಯೂಸೆಕ್ ನೀರನ್ನು ಹರಿಸಿ ಜೋಗದ ಸೊಬಗನ್ನು ಪ್ರವಾಸಿಗರಿಗೆ ಉಣಿಸಲಾಗುವುದು. ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣವನ್ನು 300 ಕ್ಯೂಸೆಕ್‌ಗೆ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಸಾವಿರ ಪ್ರವಾಸಿಗರು ವಾಸ್ತವ್ಯ ಮಾಡಲು 2 ಹೋಟೆಲ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದ ಪ್ರತಿಷ್ಠಿತ ಯೋಜನೆಯಾಗಿರುವ ಹೆಲಿ ಟೂರಿಸಂ ಸರ್ಕೀಟ್‌ಗೆ ಜೋಗ ಜಲಪಾತವನ್ನು ಸೇರ್ಪಡೆ ಮಾಡಲಾಗಿದೆ. ಒಟ್ಟಾರೆ ವರ್ಷದ 365 ದಿನಗಳು ಜೋಗದ ಸೊಬಗನ್ನು ರಾಜ್ಯ, ಹೊರ ರಾಜ್ಯಗಳು ಹಾಗೂ ದೇಶ-ವಿದೇಶಗಳ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು ಎಂದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದ ಜಿಡಿಪಿ 14.85%ರಷ್ಟಿದ್ದು, ನೇರವಾಗಿ 35.00 ಲಕ್ಷ ಹಾಗೂ ಪರೋಕ್ಷವಾಗಿ 50.00 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡಿದೆ. ಅತೀ ಹೆಚ್ಚು ಮೋಟಾರ್ ವಾಹನ ತೆರಿಗೆ ಪಾವತಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿದೆ. ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಕೇರಳ, ಗೋವಾ, ಹಿಮಾಚಲಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ ಹಾಗೂ ಜಮ್ಮು-ಕಾಶ್ಮೀರ ರಾಜ್ಯಗಳಿಗೆ ಸ್ಪರ್ಧೆ ನೀಡಿ ಅತೀ ಹೆಚ್ಚು ಪ್ರವಾಸಿಗರನ್ನು ರಾಜ್ಯಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ.
ಕೇರಳ ಜಿಡಿಪಿ 10%, ಗೋವಾ ಜಿಡಿಪಿ 16.43%, ರಾಜಸ್ಥಾನ ಜಿಡಿಪಿ 15%, ಜಮ್ಮು-ಕಾಶ್ಮೀರ ಜಿಡಿಪಿ 15%, ಉತ್ತರಪ್ರದೇಶ ಜಿಡಿಪಿ 10%, ಮಧ್ಯಪ್ರದೇಶ ಜಿಡಿಪಿ 8%, ಹಿಮಾಚಲಪ್ರದೇಶ ಜಿಡಿಪಿ 7% ಇದೆ. ಹೀಗಾಗಿ, ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರ ಆಯಾ ರಾಜ್ಯಗಳ ಆರ್ಥಿಕತೆ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.
2021-22ನೇ ಸಾಲಿನ ಆಯವ್ಯಯದಲ್ಲಿ ಪ್ರವಾಸೋದ್ಯಮ ಇಲಾಖೆಗೆ ನಮ್ಮ ರಾಜ್ಯದಲ್ಲಿ ಕೇವಲ ರೂ.228.75 ಕೋಟಿಗಳನ್ನು ಮಾತ್ರ ಒದಗಿಸಲಾಗಿದೆ. ಪ್ರವಾಸೋದ್ಯಮ ವಲಯಕ್ಕೆ ಕನಿಷ್ಠ ಒಂದು ಸಾವಿರ ಕೋಟಿ ಹಣ ನೀಡಿದರೆ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿ ಜಿಡಿಪಿ ದರವನ್ನು ಮತ್ತಷ್ಟು ವೃದ್ಧಿಪಡಿಸಬಹುದು ಹಾಗೂ ಉದ್ಯೋಗಗಳನ್ನು ಸೃಷ್ಟಿ ಮಾಡಬಹುದು.
ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೆ ಆಯವ್ಯಯದಲ್ಲಿ ಅತೀ ಕಡಿಮೆ ಅನುದಾನ ಒದಗಿಸಲಾಗಿದೆ. ಹೀಗಾಗಿ, ನಾನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾಡೆಲ್) ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ಮಾತುಕತೆ ನಡೆಸಿದ್ದೇನೆ. ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಇಂಧನ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಗೆ ಪ್ರತಿ ಸಚಿವ ಸಂಪುಟ ಸಭೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಟೆಂಡರ್‌ಗಳಿಗೆ ಅನುಮೋದನೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೂ ಹೆಚ್ಚಿನ ಹಣ ಒದಗಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತೇನೆ ಎಂದರು.
ಪ್ರತಿಷ್ಠಿತ ಮೂರು ವಿಮಾನ ನಿಲ್ದಾಣಗಳ ಪಟ್ಟಿಗೆ ಬೆಂಗಳೂರು :ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಆರಂಭವಾದ ನಂತರ ದೇಶದ ಪ್ರತಿಷ್ಠಿತ ಮೂರು ವಿಮಾನ ನಿಲ್ದಾಣಗಳ ಪಟ್ಟಿಗೆ ಬೆಂಗಳೂರು ವಿಮಾನ ನಿಲ್ದಾಣ ಸೇರಲಿದೆ. ಸುಂದರ ಕಡಲ ಕಿನಾರೆ, ಪ್ರಕೃತಿ ಸಂಪತ್ತು, ಪುರಾಣ ಪ್ರಸಿದ್ಧ ದೇವಾಲಯಗಳು, ನದಿ ಹಾಗೂ ಜಲಾಶಯಗಳನ್ನು ಹೊಂದಿರುವ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ.
ಕರಾವಳಿ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಪಾರಂಪರಿಕ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಆಧ್ಯಾತ್ಮಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ, ದೇವಾಲಯ ಪ್ರವಾಸೋದ್ಯಮ ಯೋಜನೆಗಳಿಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. ಮುಂದಿನ ನಮ್ಮ ಸರ್ಕಾರದ 2 ವರ್ಷಗಳ ಅವಧಿಯಲ್ಲಿ ರಾಜ್ಯದ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಬೇಲೂರು, ಹಂಪಿ, ಬಾದಾಮಿ ಹಾಗೂ ವಿಜಯಪುರದಲ್ಲಿ 3 ಸ್ಟಾರ್ ಹೋಟೆಲ್‌ಗಳ ನಿರ್ಮಾಣ ಮಾಡಲು ಈ ತಿಂಗಳಲ್ಲೇ ಶಿಲಾನ್ಯಾಸ ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರಿನ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರ ಸೇರಿದಂತೆ ಮೈಸೂರು, ಗುಲ್ಬರ್ಗಾ, ಮಂಗಳೂರು, ಬಳ್ಳಾರಿ ಹಾಗೂ ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಹೆಲಿಪೋರ್ಟ್ ಸ್ಥಾಪನೆ ಮಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹಾಗೂ ನೆರೆಯ ಗೋವಾ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಪಾಂಡಿಚೇರಿಗಳಿಗೆ ಪ್ರವಾಸೋದ್ಯಮ ಸರ್ಕೀಟ್ ನಿರ್ಮಾಣ ಮಾಡುವ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ. ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಸರ್ಕೀಟ್ ಮಾಡಲು ಯೋಜನೆ ರೂಪಿಸಲಾಗಿದೆ. ಕಡಲ ತೀರದಲ್ಲಿ ಪ್ರವಾಸಿಗರಿಗೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸೀ-ಪ್ಲೇನ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ, ಉತ್ತರಕರ್ನಾಟಕ, ಕರಾವಳಿ, ಮೈಸೂರು, ಬೆಂಗಳೂರು ನಗರ ಹಾಗೂ ಸುತ್ತಮುತ್ತ ಪ್ರವಾಸಿಗರಿಗೆ ಆಕರ್ಷಿತವಾಗುವ ಹಲವಾರು ಪ್ರವಾಸೋದ್ಯಮ ಹಾಗೂ ಆತಿಥ್ಯ ಯೋಜನೆಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಬ್ರ್ಯಾಂಡ್ ಮೈಸೂರು ಮಾದರಿಯಲ್ಲಿ ಹತ್ತಕ್ಕೂ ಹೆಚ್ಚು ಜಿಲ್ಲೆಗಳನ್ನು ಪ್ರವಾಸೋದ್ಯಮ ಬ್ರ್ಯಾಂಡ್ ಮಾಡಲು ನಿರ್ಧರಿಸಲಾಗಿದೆ. ನಂದಿ ಬೆಟ್ಟ, ಮಧುಗಿರಿ ಏಕಶಿಲಾ ಬೆಟ್ಟ, ಜೋಗ ಜಲಪಾತ ಸೇರಿದಂತೆ ಕೆಲವು ಕಡೆ ರೋಪ್-ವೇ ನಿರ್ಮಿಸಲು ಅಗತ್ಯ ಸಿದ್ಧತೆ ಮಾಡಲಾಗಿದೆ. 100 ಕ್ಯಾರಾವಾನ್‌ಗಳನ್ನು ಸಿದ್ಧಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ನದಿ ಹಾಗೂ ಜಲಾಶಯಗಳಲ್ಲಿ ಜಲಕ್ರೀಡೆ ಹಾಗೂ ಸಾಹಸ ಕ್ರೀಡೆಗಳನ್ನು ಆರಂಭಿಸಲಾಗುವುದು. ರಾಮಜನ್ಮ ಭೂಮಿಯಲ್ಲಿ ಕರ್ನಾಟಕದ ಯಾತ್ರಿನಿವಾಸ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಆತಿಥ್ಯ ಕ್ಷೇತ್ರಕ್ಕೆ ಸರ್ಕಾರದ ಪರಿಹಾರ ಕ್ರಮಗಳು :ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಲು ವರ್ಗೀಕೃತ ಸ್ಟಾರ್ ಹೋಟೆಲ್‌ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಲಾಗಿದೆ. 2021-25ನೇ ಸಾಲಿನ ಪ್ರವಾಸೋದ್ಯಮ ನೀತಿಗೆ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್‌ಗಳ ಶೇ.50ರಷ್ಟು ಆಸ್ತಿ ತೆರಿಗೆಯನ್ನು ಮನ್ನಾ ಮಾಡಲಾಗಿದೆ. ಮೂರು ತಿಂಗಳ ವಿದ್ಯುತ್ ಶುಲ್ಕ ಪಾವತಿಗೆ ವಿನಾಯಿತಿ ನೀಡಲಾಗಿದೆ. ಅಬಕಾರಿ ಸನ್ನದು ಶುಲ್ಕ ಶೇ.50ರಷ್ಟು ಮೊತ್ತವನ್ನು ಪಾವತಿಸಿ ಉಳಿದ ಶೇ.50ರಷ್ಟು ಶುಲ್ಕ ಮೊತ್ತವನ್ನು ಪಾವತಿಸಲು 6 ತಿಂಗಳ ಕಾಲಾವಕಾಶ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಪ್ರತೀ ಪ್ರವಾಸಿ ಮಾರ್ಗದರ್ಶಿ ಬ್ಯಾಂಕ್ ಖಾತೆಗೆ 5000 ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ.
ರಾಜ್ಯದಲ್ಲಿರುವ ಎಲ್ಲಾ 17 ನದಿಗಳು ಕಲುಷಿತಗೊಂಡಿವೆ. ರಾಜ್ಯದ ಪ್ರಮುಖ ನದಿಗಳು, ಉಪ ನದಿಗಳು, ಸರೋವರಗಳು ಹಾಗೂ ಕೆರೆಗಳ ನೀರಿನ ಗುಣಮಟ್ಟದ ಮಾಪನವನ್ನು 278 ಸ್ಥಳಗಳಲ್ಲಿ ಅಳವಡಿಸಲಾಗಿದ್ದು, ಮಾಪನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ, ಸ್ಥಳೀಯ ಸಂಸ್ಥೆಗಳು, ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳಿಗೆ ನೀರಿನ ಮೂಲಗಳನ್ನು ಕಲುಷಿತಗೊಳಿಸದಂತೆ ತಿಳುವಳಿಕೆ ನೀಡಲಾಗಿದೆ ಎಂದು ಹೇಳಿದರು.
ಕೋವಿಡ್-19ರ ಈ ಸಂದರ್ಭದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಹಲವಾರು ತರಬೇತಿ ಹಾಗೂ ಜಾಗೃತಿ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಸಿ ಕಸ, ಒಣ ಕಸ ಬೇರ್ಪಡಿಸುವುದು. ನೀರಿನ ಮೂಲಗಳನ್ನು ಮಾಲಿನ್ಯವಾಗದಂತೆ ಕಾಪಾಡುವುದು. ಗಿಡ ಮರಗಳನ್ನು ಬೆಳೆಸುವುದು. ಕಲುಷಿತ ನೀರಿನ ನಿರ್ವಹಣೆ ಮಾಡುವುದು. ವಾಹನಗಳ ಹೊಗೆಯಿಂದ ಉಂಟಾಗುವ ವಾಯು ಮಾಲಿನ್ಯ ನಿಯಂತ್ರಿಸುವುದು. ಪ್ಲ್ಯಾಸ್ಟಿಕ್ ವಸ್ತುಗಳಿಗೆ ಪರ್ಯಾಯ ವಸ್ತುಗಳನ್ನು ಬಳಸುವುದು. ಪರಿಸರ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸಲು ಹಲವಾರು ಪರಿಸರಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.