ಬೆಂಗಳೂರು:ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಸುಸಜ್ಜಿತ ಶಾಲೆ, ಪ್ರೌಢ ಶಾಲೆಗಳ ಕಟ್ಟಡ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಅಂಗನವಾಡಿ ಕಟ್ಟಡಗಳ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯಿಂದ ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಮತ್ತು ಸುರಕ್ಷತೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಈ ಕಟ್ಟಡಗಳನ್ನು ನಿರ್ಮಿಸುವ ಜವಾಬ್ಧಾರಿ ವಹಿಸಿಕೊಂಡಿದೆ.
ಶಿಕ್ಷಣ ಇಲಾಖೆಯ ಸಹಯೋಗದಲ್ಲಿ 756 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ 3,423 ಪ್ರಾಥಮಿಕ ಹಾಗು ಪ್ರೌಢಶಾಲೆಗಳ ಕಟ್ಟಡಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ 2,684 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಈ ಯೋಜನೆಯನ್ನು ನಬಾರ್ಡನ ಆರ್.ಐ.ಡಿ.ಎಫ್-25 ಅನ್ವಯ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.