ಬೆಂಗಳೂರು:ಡೈರೆಕ್ಟರೇಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್ ರಚನೆ ಕುರಿತ ಪ್ರಧಾನಿಯವರ ಕನಸನ್ನು ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಜಾರಿ ಮಾಡಲಾಗಿದೆ. ಇದರಿಂದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗುಡಿ ಕೈಗಾರಿಕೆ ಮೂಲಕ ರೈತರಿಗೆ ಹೆಚ್ಚಿನ ಆದಾಯ, ಉದ್ಯೋಗ ಹೆಚ್ಚಳ ಸಾಧ್ಯವಾಗಿದೆ. ಕೃಷಿ ಉಪ ಉತ್ಪನ್ನಗಳ ತಯಾರಿಕೆಯೂ ಸಾಧ್ಯವಾಗುತ್ತಿದೆ ಎಂದು ರಾಜ್ಯದ ಕೃಷಿ ಇಲಾಖೆ ಸಚಿವರಾದ ಬಿ.ಸಿ.ಪಾಟೀಲ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆತ್ಮನಿರ್ಭರ್ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕಗಳನ್ನು ರಚಿಸಲು ಸೆಕೆಂಡರಿ ಡೈರೆಕ್ಟರೇಟ್ ನೆರವಾಗಲಿದೆ. ಇದರಡಿ ಘಟಕಕ್ಕೆ ಪಡೆದ ಸಾಲಕ್ಕೆ ಶೇ 35ರಷ್ಟು ಸಬ್ಸಿಡಿ ಸಿಗಲಿದೆ. ಅಲ್ಲದೆ ರಾಜ್ಯ ಸರಕಾರವು ಶೇ 15 ಸಬ್ಸಿಡಿ ನೀಡಲಿದ್ದು, ಒಟ್ಟು 50 ಶೇಕಡಾ ಸಬ್ಸಿಡಿ ಸಿಗಲಿದೆ ಎಂದು ವಿವರಿಸಿದರು.
ರೈತರ ಮಕ್ಕಳಿಗೆ ಕೃಷಿ ಕಾಲೇಜು ಸೇರಲು ಶೇ.40 ರಷ್ಟಿದ್ದ ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ. ಕಳೆದ ವರ್ಷ 186 ಜನ ರೈತರ ಮಕ್ಕಳಿಗೆ ಹೆಚ್ಚುವರಿ ಸೀಟು ಲಭಿಸಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ರೈತ ವಿದ್ಯಾನಿಧಿ ಆರಂಭ ಮಾಡಿದ್ದು, ಇದರಿಂದ 7.13 ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 261 ಕೋಟಿ ರೂ. ವಿದ್ಯಾರ್ಥಿವೇತನ ಸಿಕ್ಕಿದೆ. ಇದು ಕೂಡ ದೇಶದಲ್ಲೇ ಮೊದಲು ಎಂದರು.