ಬೆಂಗಳೂರು:ಆತ್ಮಹತ್ಯೆಗೆ ಯತ್ನಿಸಿದ್ದವನ ಬದುಕು ಬದಲಾಯಿಸಿ ಮಾದರಿ ರೈತನನ್ನಾಗಿ ಮಾಡಿದ್ದು 'ಸಮಗ್ರ ಕೃಷಿ ಪದ್ಧತಿ'. ಇಂತಹ ಮಾದರಿ ರೈತ ದುರ್ಗಪ್ಪ ಅಂಗಡಿಯವರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಖುದ್ದು ವಿಕಾಸಸೌಧದ ತಮ್ಮ ಕಚೇರಿಗೆ ಇಂದು ಕರೆಯಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಡಿಮೆ ನೀರಿನಲ್ಲಿಯೂ ಕೃಷಿ ಸಾಧನೆ ಮಾಡುವ ಕೋಲಾರದ ರೈತರು ಇಡೀ ರಾಜ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಸಮಗ್ರ ಕೃಷಿ ಪದ್ಧತಿ ಎನ್ನುವುದು ರೈತರನ್ನು ಒಂದಲ್ಲ ಒಂದು ರೀತಿಯಲ್ಲಿ ಕೈಹಿಡಿದೇ ಹಿಡಿಯುತ್ತದೆ. ಸಾಲ ಮಾಡಿದೆನೆಂದು ಕೊರಗುವುದನ್ನು ಬಿಟ್ಟು ಅದರಿಂದ ಹೊರಬಂದು ಆದಾಯವನ್ನು ದ್ವಿಗುಣಗೊಳಿಸುವುದು ಹೇಗೆ ಎಂಬುದನ್ನು ದುರ್ಗಪ್ಪ ಅಂಗಡಿ ಮಾಡಿ ತೋರಿಸಿದ್ದಾರೆ. ಇಂತಹ ರೈತರು ಎಲ್ಲಾ ಅನ್ನದಾತರಿಗೂ ಸ್ಫೂರ್ತಿ ಎಂದು ಸಚಿವರು ಶ್ಲಾಘಿಸಿದರು.
ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕಾಗಿಯೇ 'ರೈತರೊಂದಿಗೊಂದು ದಿನ' ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಆತ್ಮಸ್ಥೈರ್ಯ ಹೇಗೆ ಪರಿಣಾಮಕಾರಿ ಮತ್ತು ಸ್ಫೂರ್ತಿದಾಯಕವೆನ್ನುವುದನ್ನು ದುರ್ಗಪ್ಪ ಅಂಗಡಿ ಮಾಡಿ ತೋರಿಸಿದ್ದಾರೆ ಹಾಗೂ ತೋರಿಸುತ್ತಿದ್ದಾರೆ. ಇಂತಹ ಗಟ್ಟಿಮನಸಿನ ರೈತರೇ ಇತರರಿಗೂ ಮಾದರಿಯಾಗಬಲ್ಲರೆಂಬುದನ್ನು ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಮಹಾದೇವ ವೇಳಿಪ ನಿಧನ
ಅಲ್ಲದೇ ಅನ್ನದಾತನ ಸ್ಫೂರ್ತಿದಾಯಕ ಬದುಕು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗುವುದೆಂದರೆ, ಅದೂ ನಮ್ಮ ರಾಜ್ಯದ ಅನ್ನದಾತ ಎನ್ನುವುದು ಹೆಮ್ಮೆಯೇ ಸರಿ. ಸಾಧನೆಗೆ ಶೈಕ್ಷಣಿಕ ಅರ್ಹತೆಯೊಂದೇ ಮುಖ್ಯವಲ್ಲ. ಸಾಧಿಸುವ ಛಲ, ದಿಟ್ಟ ನಡೆ ಮೂಖ್ಯ ಎಂಬುದನ್ನು ದುರ್ಗಪ್ಪ ಅಂಗಡಿ ತೋರಿಸಿಕೊಟ್ಟಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.