ಬೆಂಗಳೂರು: ನಗರದ ಐಟಿಐ ಕಾರ್ಖಾನೆಯಲ್ಲಿ ಕೆಲಸಗಾರರನ್ನು ವಜಾಗೊಳಿಸುರುವುದರ ಬಗ್ಗೆ ಸೂಕ್ತ ಮಾಹಿತಿ ಪಡೆದು, ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಬಿ.ಸಿ. ನಾಗೇಶ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ನಲ್ಲಿ ನಿಯಮ 72ರ ಅಡಿ ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ಪ್ರಶ್ನೆಯು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಇಲಾಖೆಯಲ್ಲಿ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ.
ಆದರೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಕೋರಲಾಗಿ, ಸದರಿಯವರು ಈ ಕೆಳಕಂಡಂತೆ ಮಾಹಿತಿ ನೀಡಿರುತ್ತಾರೆ. ಸದಸ್ಯರು ಸಾಕಷ್ಟು ಒತ್ತಾಯ ಮಾಡಿರುವ ಹಿನ್ನೆಲೆ ಕೂಡಲೇ ಈ ಬಗ್ಗೆ ಮಾತುಕತೆ ನಡೆಸಿ, ಅವರ ಸಮಸ್ಯೆ ಏನೆಂದು ಅರಿತು, ಕೆಲಸದಿಂದ ವಜಾಗೊಳಿಸಿದ್ದರ ಹಿಂದೆ ಸೂಕ್ತ ಕಾರಣ ಲಭಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಕಾಶ್ ರಾಥೋಡ್ ಮಾತನಾಡಿ, ಕೋವಿಡ್ ಅವಧಿಯಲ್ಲಿ 3 ಸಾವಿರ ವೆಂಟಿಲೇಟರ್ ನಿರ್ಮಿಸಿದವರು ವಜಾ ಆಗಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಸರ್ಕಾರದ ಪರವಾಗಿ ಸಚಿವರು ಉತ್ತರ ಕೊಡಬೇಕು. ನಾನೂ ಸಹ ಒಂದು ಸಮಯದಲ್ಲಿ ಇಲ್ಲಿ ಕೆಲಸ ಮಾಡಿದ್ದೆ. ನನ್ನ ಜತೆ ಕೆಲಸ ಮಾಡಿದ್ದ ಹಲವು ಮಂದಿ ಈಗ ಉದ್ಯೋಗ ಕಳೆದುಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.