ಬೆಂಗಳೂರು:ಗ್ಯಾಂಗ್ ರೇಪ್ ವೈರಲ್ ವಿಡಿಯೋ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿದ ನಮ್ಮ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ.ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ಆಗಿರೋ ವಿಡಿಯೋ ವೈರಲ್ ಆಗಿತ್ತು. ಅಲ್ಲಿರುವ ವ್ಯಕ್ತಿಗಳು ಯಾರು ಅಂತ ಸಂಶಯವಿತ್ತು. ನಮ್ಮ ಕೇಂದ್ರ ಸಚಿವ ಕಿರಿಣ್ ರಿಜುಜು ಈ ಬಗ್ಗೆ ಟ್ವೀಟ್ ಮಾಡಿದ್ದರು. ಆ ಹಿನ್ನೆಲೆಯಲ್ಲಿ ನಮ್ಮ ಪೊಲೀಸರು ಮಾಹಿತಿ ಪಡೆದು ಟ್ರೇಸ್ ಮಾಡಿ, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಯುವತಿ ಸೇರಿ ಕೆಲವರು ವಿಡಿಯೋದಲ್ಲಿದ್ದಾರೆ. ಇನ್ನೂ ಕೆಲವರು ಕೇರಳದಲ್ಲಿದ್ದಾರೆ ಅಂತ ಮಾಹಿತಿ ಬಂದಿದೆ. ರಾಮಮೂರ್ತಿ ನಗರದಲ್ಲಿ ಎಫ್ಐಆರ್ ಆಗಿದೆ. ಕೆಲವೇ ಗಂಟೆಗಳಲ್ಲಿ ನಮ್ಮ ಬೆಂಗಳೂರು ಪೊಲೀಸರು ಕೆಲಸ ಮಾಡಿದ್ದು, ಅವರನ್ನ ಶ್ಲಾಘಿಸುತ್ತೇನೆ. ಮೊದಲು ಎಲ್ಲಿ ನಡೆದಿದ್ದು, ಯಾವ ಜಾಗ ಅಂತ ಗೊತ್ತಿರಲಿಲ್ಲ. ಟ್ರೇಸ್ ಮಾಡಿದಾಗ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿದ್ದಾರೆ ಅಂತ ಗೊತ್ತಾಗಿತ್ತು ಎಂದರು.
ರಮೇಶ್ ಜಾರಕಿಹೊಳಿ ಪರವಾಗಿ ಗೃಹ ಸಚಿವರಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಟಾಂಗ್ ನೀಡಿದ ಬೊಮ್ಮಾಯಿ, ಇವರು ಇಷ್ಟು ದಿನ ಬಿಟ್ಟು ಈಗ ಮಾತನಾಡಲು ಕಾರಣ ಇದೆ. ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ ದಾಖಲಾಗಿದೆ. ತನಿಖೆಗೆ ವರದಿ ಸಲ್ಲಿಸಲಾಗಿದೆ. ಮತ್ತೆ ಎರಡು ದಿನ ಬಿಟ್ಟು ಮತ್ತೆ ವರದಿ ಸಲ್ಲಿಸಲಾಗುವುದು. ತನಿಖೆ ದಿಕ್ಕು ತಪ್ಪಿಸಲು ಈ ರೀತಿ ಹೇಳಲಾಗುತ್ತಿದೆ. ಮೇಟಿ ಕೇಸ್‌ನಲ್ಲಿ ತನಿಖೆ ನಡೆಸಿದ್ದರು. ಆದರೆ, ಮೇಟಿ ಮೇಲೆ ಎಫ್ಐಆರ್ ಆಗಿರಲಿಲ್ಲ. ಘಟನೆ ನಡೆದಾಗ ಯುವತಿಯಿಂದ ಆಗ ದೂರು ಕೊಡದಂತೆ ತಡೆದವರು ಯಾರು ಎಂದು ಪ್ರಶ್ನಿಸಿದರು.