ಕರ್ನಾಟಕ

karnataka

ಸಿಎಂ ವಿರುದ್ಧ ವಿಶ್ವನಾಥ್ ಟೀಕೆಗೆ ಬೈರತಿ ಬಸವರಾಜ್​​ ಖಂಡನೆ

By

Published : May 6, 2021, 6:58 PM IST

Updated : May 6, 2021, 7:23 PM IST

ಸಿಎಂ ಬಿಎಸ್​ವೈ ಇಳಿವಯಸ್ಸಿನಲ್ಲೂ ದೇವರ ಕೃಪೆಯಿಂದ ಆರೋಗ್ಯವಾಗಿ ಇದ್ದು ಸರಕಾರವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಸಚಿವ ಬಿ.ಎ. ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದರು.

Minister Bairati Basavaraju on H.Vishwanath
ಸರ್ಕಾರದ ಮತ್ತು ಸಿಎಂ ವಿರುದ್ಧ ವಿಶ್ವನಾಥ್ ಟೀಕೆಗೆ ಬೈರತಿ ಬಸವರಾಜ್​​ ಖಂಡನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಟೀಕಿಸಿರುವುದನ್ನು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್ ತೀವ್ರವಾಗಿ ಖಂಡಿಸಿದ್ದಾರೆ.

ಸಚಿವ ಬೈರತಿ ಬಸವರಾಜ್​​

ಬಿಬಿಎಂಪಿ ಮಹದೇವಪುರ ವಲಯದ ಕೊರೊನಾ ಸೋಂಕು ನಿಯಂತ್ರಣ ಸಭೆ ‌ನಂತರ ಮಾತನಾಡಿದ ಸಚಿವರು, "ವಿಶ್ವನಾಥ ಅವರು ಹಿರಿಯ ರಾಜಕಾರಣಿ ಆಗಿದ್ದಾರೆ. ಮೇಲಾಗಿ ಆಡಳಿತ ಪಕ್ಷದ ಪರಿಷತ್ತಿನ ಸದಸ್ಯರು, ಹೀಗಿದ್ದರೂ ಕೂಡ ಸರ್ಕಾರದ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಮಾಧ್ಯಮದ ಮೂಲಕ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ಅವರ ಘನತೆಗೆ ತಕ್ಕದಲ್ಲ" ಎಂದು ‌ಹೇಳಿದರು.

ಯಡಿಯೂರಪ್ಪನವರು ಈ ಇಳಿವಯಸ್ಸಿನಲ್ಲೂ ದೇವರ ಕೃಪೆಯಿಂದ ಆರೋಗ್ಯವಾಗಿ ಇದ್ದು ಸರಕಾರವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿದಿನ ಕೋವಿಡ್ ನಿಯಂತ್ರಣ ಮಾಡಲು ಸಭೆಗಳನ್ನ ಮಾಡುತ್ತಿದ್ದಾರೆ. ಅವರ ಜೊತೆ ನಾವೆಲ್ಲರೂ ಇದ್ದೇವೆ ಎಂದರು.

ಇದನ್ನೂ ಓದಿ:ಆಮ್ಲಜನಕ ಸಿಲಿಂಡರ್‌, ಸಾಂದ್ರಕಗಳನ್ನು ಹೊತ್ತು ತಂದ ಬ್ರಿಟಿಷ್ ಏರ್‌ವೇಸ್ ವಿಮಾನ

ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ. ನಮ್ಮ ಎಲ್ಲಾ ಸಚಿವರ ಸಹಕಾರ ಅವರಿಗೆ ಸಂಪೂರ್ಣವಾಗಿ ಇದೆ. ಕೊರೊನಾ ನಿಯಂತ್ರಣಕ್ಕೆ ನಾವೆಲ್ಲರೂ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ ಎಂದು ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂರು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ವಿಶ್ವನಾಥ ಅವರಿಗೆ ಇದೆ. ಇಂತಹ ಸಂದರ್ಭಗಳಲ್ಲಿ ಅವರು ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಕೈಜೋಡಿಸಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬಹಿರಂಗವಾಗಿ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡಿ ತಮ್ಮ ಗೌರವವನ್ನು ತಾವೇ ಕಡಿಮೆ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಬೈರತಿ ಬಸವರಾಜ್ ಹೇಳಿದರು.

Last Updated : May 6, 2021, 7:23 PM IST

ABOUT THE AUTHOR

...view details