ಬೆಂಗಳೂರು:ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಮುಸ್ಲಿಂ ಸಮುದಾಯದ ಮತಕ್ಕೆ ಪೈಪೋಟಿಗೆ ಬಿದ್ದಿದ್ದಾರೆ ಎಂದು ಸಚಿವ ಅಶ್ವತ್ಥ ನಾರಾಯಣ್ ವಾಗ್ದಾಳಿ ನಡೆಸಿದರು. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಇಂತ ಪೈಪೋಟಿಗೆ ನಾವು ಇಳಿದಿಲ್ಲ. ಪೈಪೋಟಿಗೆ ಇಳಿದಿರೋದು ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ. ಮುಸ್ಲಿಂ ಮತಕ್ಕಾಗಿ ಓಲೈಕೆ ಕೆಲಸ ಮಾಡ್ತಿದ್ದಾರೆ. ಮುಸ್ಲಿಂಮರನ್ನು ಎತ್ತು ಕಟ್ಟುವ ಕೆಲಸ ಮಾಡ್ತಿರೋದು, ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ನವರು ಎಂದರು.
ಶ್ರೀಲಂಕಾದಲ್ಲಾದ ರೀತಿ ನಮ್ಮಲ್ಲಿ ಎಂದೂ ಆಗಲ್ಲ. ನಮ್ಮ ಸರ್ಕಾರ ಇರೋವರೆಗೂ ಎಂದೂ ಶ್ರೀಲಂಕಾಗೆ ಬಂದ ಪರಿಸ್ಥಿತಿ ಬರಲ್ಲ. ಭಾರತದ ನಾಯಕತ್ವ ವಿಶ್ವವೇ ನೋಡುತ್ತಿದೆ. ಏನೂ ಇಲ್ಲದಿರೋದನ್ನ ಎತ್ತಿ ಕಟ್ಟುವ ಕೆಲಸ ಮಾಡ್ತಿಲ್ಲ ಎಂದು ಕಿಡಿಕಾರಿದರು.
ಡಿಕೆಶಿಗೆ ವಿಪಕ್ಷದಲ್ಲೇ ಕೂರುವಂತೆ ಟ್ವೀಟ್ ಮಾಡಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಅಧ್ಯಕ್ಷರು ಅಧಿಕ ಕಾಲ ಅಧಿಕಾರದಲ್ಲೇ ಇದ್ದವರು. ಅಧಿಕಾರದಲ್ಲೇ ಇದ್ದ ಕಾಲದಲ್ಲಿ ಇವರ ಸಾಧನೆ, ವ್ಯಕ್ತಿತ್ವ ನಾಡಿಗೆ ಗೊತ್ತಿದೆ. ಯಾರೂ ಕೂಡ ಇವರನ್ನ ನಂಬಲ್ಲ. ನಮ್ಮ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಅದೃಷ್ಟ ಇದ್ದರೆ ಕಾಂಗ್ರೆಸ್ ವಿಪಕ್ಷದಲ್ಲಿ ಕೂರಬಹುದು, ಇಲ್ಲ ಅಂದ್ರೆ ಅದೂ ಇಲ್ಲ ಎಂದು ಟೀಕಿಸಿದರು.