ಬೆಂಗಳೂರು: ಒಂದು ವಾರದೊಳಗೆ ಪದ್ಮನಾಭ ನಗರ ಕ್ಷೇತ್ರದಲ್ಲಿರುವ ರಸ್ತೆಗುಂಡಿಗಳನ್ನು ಮುಚ್ಚಬೇಕು, ಸಮಸ್ಯೆ ಬಗೆಹರಿಯದಿದ್ದರೆ ಎಲ್ಲರನ್ನೂ ಕಪ್ಪುಪಟ್ಟಿಗೆ ಸೇರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಖಡಕ್ ಸೂಚನೆ ಕೊಟ್ಟಿದ್ದಾರೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಿದ ಅಶೋಕ್, ಕ್ಷೇತ್ರದ ಕುಂದು-ಕೊರತೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದರು. ಗಣೇಶ ಮಂದಿರ, ಪದ್ಮನಾಭನಗರ, ಕುಮಾರಸ್ವಾಮಿ ಬಡಾವಣೆ, ಚಿಕ್ಕಲ್ಲಸಂದ್ರ ಮುಂತಾದ ಕಡೆಗಳಲ್ಲಿ ಆಗುತ್ತಿರುವ ಕಸ ವಿಲೇವಾರಿ ಸಮಸ್ಯೆ ಕುರಿತು ಚರ್ಚಿಸಿದ ಸಚಿವರು, ಹತ್ತು ದಿನಗಳೊಳಗೆ ಎಲ್ಲಾ ಸಮಸ್ಯೆ ಬಗೆಹರಿಯಬೇಕು. ಅಲ್ಲಲ್ಲಿ ಬಿದ್ದಿರುವ ಮರಗಳು, ಕಟ್ಟಡದ ತ್ಯಾಜ್ಯಗಳನ್ನು ಬೇಗ ವಿಲೇವಾರಿ ಮಾಡಬೇಕು. ನಾನು ಮತ್ತೊಮ್ಮೆ ಪರಿಶೀಲನಾ ಸಭೆ ನಡೆಸುತ್ತೇನೆ. ಅನಗತ್ಯವಾಗಿ ಮಂಜೂರಾಗಿರುವ ಆಟೋ, ಟಿಪ್ಪರ್ಗಳನ್ನು ತಕ್ಷಣ ರದ್ದುಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ನಿಂದ ಮೃತಪಟ್ಟವರಲ್ಲಿ 653 ಜನರು ಪರಿಹಾರಕ್ಕೆ ಅರ್ಹರು. ಅದರಲ್ಲಿ 103 ಜನರ ಅರ್ಜಿ ಈಗಾಗಲೇ ಸ್ವೀಕೃತಿ ಆಗಿದೆ. ಉಳಿದ ಅರ್ಜಿಗಳಿಗೆ ಶೀಘ್ರವೇ ಅಂತಿಮ ರೂಪ ನೀಡುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.