ಬೆಂಗಳೂರು: ವಿಧಾನಸಭೆ ಕಲಾಪದಲ್ಲಿಂದು ಮತ್ತೆ ಜೂಜಾಟದ ವಿಚಾರ ಪ್ರಸ್ತಾಪವಾಗಿದೆ. ಶಾಸಕ ಡಾ.ರಂಗನಾಥ್ ಹೆಚ್ ಡಿ, ಕೋವಿಡ್ ಬಂದ ಹಿನ್ನೆಲೆಯಲ್ಲಿ ಬಹಳಷ್ಟು ಗ್ರಾಮೀಣ ಪ್ರದೇಶದ ಯುವಕರು ಗುಳೆ ಬಂದಿದ್ದಾರೆ. ಹಲವು ಕಡೆ ಕಾನೂನು ಬಾಹಿರವಾಗಿ ಜೂಜಾಟ ನಡೆಯುತ್ತಿದೆ. ಜೂಜಾಟದ ವ್ಯವಸ್ಥೆಯನ್ನು ಸಂಘಟನೆಯಾಗಿ ಕೆಲ ಸ್ಥಳಗಳಲ್ಲಿ ಸೇರುತ್ತಾರೆ. ಇಂತಹ ಕೃತ್ಯಗಳನ್ನು ತಡೆಯಬೇಕು. ಗ್ರಾಮೀಣ ಪ್ರದೇಶದ ಯುವಕರು ಬೆಂಗಳೂರಿಗೆ ಬಂದು ಜೂಜಾಟ ಆಡುತ್ತಾರೆ. ಈ ಬಗ್ಗೆ ಕ್ರಮ ಸೂಕ್ತ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕ ರಂಗನಾಥ್ ಅವರ ವಿಷಯ ಪ್ರಸ್ತಾಪ ಕುರಿತು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಜೂಜಾಟ ಒಂದು ಸಾಮಾಜಿಕ ಪಿಡುಗು. ಇದನ್ನು ಶಾಶ್ವತವಾಗಿ ನಿಲ್ಲಿಸಲು ವಿಶೇಷ ವ್ಯವಸ್ಥೆಗಳ ಬಗ್ಗೆ ಯೋಚಿಸುತ್ತಿದ್ದೇವೆ. ಘಟಕವಾರು ಎಲ್ಲಾ ಪೊಲೀಸರಿಗೆ ಎಚ್ಚರಿಕೆ ನೀಡಿದ್ದೇವೆ. ಎಲ್ಲಿ ಜೂಜಾಟ ನಡೆಯುತ್ತದೆಯೋ ಅದರ ಮೇಲೆ ಕಣ್ಣಿಟ್ಟು, ಕಾನೂನು ಕ್ರಮ ಜರಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಗ್ಯಾಂಬ್ಲಿಂಗ್ ಮುಕ್ತ ಕರ್ನಾಟಕ ಮಾಡುವ ನಮ್ಮ ಬದ್ಧತೆ, ಇದಕ್ಕಾಗಿ ಕಠಿಣ ಕ್ರಮ ಜರುಗಿಸಲು ಕರ್ನಾಟಕ ಪೊಲೀಸ್ ತಿದ್ದುಪಡಿ ಮಸೂದೆಯನ್ನು 2021ಕ್ಕೆ ಕರ್ನಾಟಕ ಪೊಲೀಸ್ ಆ್ಯಕ್ಟ್-1963ರ ಕಾನೂನನ್ನು ಪರಿಷ್ಕರಣೆ ಮಾಡಲು ಮಸೂದೆಯನ್ನು ತರಲಾಗುತ್ತದೆ. ಇದರಿಂದ ನಮ್ಮ ಪೊಲೀಸರ ಕೈ ಬಲಪಡಿಸುವುದರ ಜೊತೆಗೆ ಗ್ಯಾಂಬ್ಲಿಂಗ್ ಮುಕ್ತ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.