ಬೆಂಗಳೂರು:ಪೊಲೀಸ್ ಇಲಾಖೆಯಲ್ಲಿ ಆಂತರಿಕ ಲೆಕ್ಕ ಪರಿಶೋಧನೆ ನಡೆಸಿ ಅವ್ಯವಹಾರ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮವೆಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಮೈಸೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆಗುತ್ತಿದೆ. ಸಂಚಾರಿ ಪೊಲೀಸರು ದಂಡ ವಸೂಲಿ ಮಾಡ್ತಾರೆ. ಆದರೆ ಅದನ್ನ ಸರ್ಕಾರಕ್ಕೆ ಕಟ್ಟುತ್ತಿಲ್ಲ. ಕೆಎಸ್‌ಆರ್‌ಪಿಲ್ಲೂ ಹಣ ದುರುಪಯೋಗ ಆಗುತ್ತಿದೆ. ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ಅಕ್ರಮ ಕಂಡುಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಆರಗ ಜ್ಞಾನೇಂದ್ರ, ವಿಶ್ವನಾಥ್ ಅವರು ನನ್ನ ಕಣ್ಣು ತೆರೆಸಿದ್ದಾರೆ. ನಾವು ಬರೀ ಕ್ತೈಂ ಬಗ್ಗೆ ಪರಿಶೀಲನೆ ಮಾಡುತ್ತಿರುತ್ತೇವೆ. ಆಂತರಿಕ ಲೆಕ್ಕ ಪರಿಶೋಧನೆ ಬಗ್ಗೆ ಪರಿಶೀಲನೆ ನಡೆಸುವುದೇ ಇಲ್ಲ, 27 ಲಕ್ಷ ರೂಪಾಯಿ ದುರುಪಯೋಗ ಆಗಿದೆ ಎಂದು ಆಂತರಿಕ ವರದಿ ಬಂದಿದೆ. ಈಗಾಗಲೇ ಸಂಬಂಧಿಸಿದವರನ್ನು ಅಮಾನತು ಮಾಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುತ್ತೇವೆ. ಕ್ರೈಮ್ ತಡೆಗಟ್ಟುವವರೇ ಕ್ರೈಮ್‌ನಲ್ಲಿ ತೊಡಗಿದ್ರೆ ಹೇಗೆ? ಇವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಇಲಾಖೆ ಸರಿ ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೊರೊನಾ ಕಾರಣದಿಂದ ಅನುದಾನ ಕಡಿತ:
ಕೊರೊನಾ ಕಾರಣದಿಂದಾಗಿ ಎಲ್ಲಾ ವಲಯಗಳಿಗೂ ಅನುದಾನ ಕಡಿತ ಮಾಡಲಾಗಿದ್ದು, ಅದರಂತೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೂ ಅನುದಾನ ಕಡಿತಗೊಳಿಸಲಾಗಿದೆ. ಇದರ ಹಿಂದೆ ಯಾವುದೇ ತಾರತಮ್ಯದ ಉದ್ದೇಶವಿಲ್ಲ. ಆರ್ಥಿಕ ಸ್ಥಿತಿಗತಿ ಉತ್ತಮವಾಗುತ್ತಿದ್ದಂತೆ ಅನುದಾನ ಹೆಚ್ಚಿಸಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಪ್ರಶ್ಬೋತ್ತರ ಕಲಾಪದಲ್ಲಿ ಸದಸ್ಯರಾದ ಬಿ.ಎಂ. ಫಾರೂಕ್ ಮತ್ತು ನಸೀರ್ ಅಹ್ಮದ್ ಪ್ರಶ್ನೆಗೆ ಸಿಎಂ ಬದಲು ಉತ್ತರಿಸಿದ ಸಚಿವ ಮಾಧುಸ್ವಾಮಿ, ಈ ಸಾಲಿನಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಗಳ ಅನುದಾನ ಕಡಿತ ಮಾಡಿದ್ದು ನಿಜ. ಎಲ್ಲಾ ವಲಯದಲ್ಲೂ ಕಡಿತ ಮಾಡಬೇಕಾದ ಸ್ಥಿತಿ ಬಂತು, ಎಲ್ಲಾ ನಿಗಮಗಳಲ್ಲಿಯೂ ಕಡಿತ ಮಾಡಿದ್ದೇವೆ. ಅಲ್ಪಸಂಖ್ಯಾತರಿಗೆ ತಾರತಮ್ಯ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.