ಬೆಂಗಳೂರು :ನಾನು ಈಗ ಗೃಹ ಖಾತೆಯಲ್ಲಿ ಎಕ್ಸ್‌ಪರ್ಟ್ ಆಗಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಈ ಖಾತೆ ಸಾಕು ಅನ್ನಿಸಿಲ್ಲ. ನಿಮಗೆ (ಮಾಧ್ಯಮದವರಿಗೆ) ಸಾಕು ಅನ್ನಿಸುತ್ತಾ ಹೇಳಿ ಎಂದು ಪ್ರಶ್ನಿಸಿದರು.
ಸಚಿವ ಸ್ಥಾನ ಭರ್ತಿ ಸಂಬಂಧ ಸಿಎಂ ಹೈಕಮಾಂಡ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಸಚಿವ ಸಂಪುಟ ಪುನಾರಚನೆ, ವಿಸ್ತರಣೆಯ ಬಗ್ಗೆ ಮಾಹಿತಿ ಇಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ಬದಲಾಗುತ್ತಾರೆ ಎಂಬುದೂ ನನಗೆ ಗೊತ್ತಿಲ್ಲ. ಅದು ಪಕ್ಷದ ಆಂತರಿಕ ವಿಚಾರ. ನಾನು ಕಮೆಂಟ್ ಮಾಡಲ್ಲ. ಎಲೆಕ್ಷನ್ ವರ್ಷ ಬರುತ್ತಿದೆ. ಎಲ್ಲಾ ಪಕ್ಷಗಳು ಸಿದ್ಧವಾಗಿರಬೇಕು. ಅದರ ಹಿನ್ನೆಲೆಯಲ್ಲಿ ಅನೇಕ ಸಂಗತಿಗಳು ಚರ್ಚೆಗೆ ಬಂದಿದೆ ಎಂದರು.
ಧ್ವನಿವರ್ಧಕ ನಿಯಮ ಕಟ್ಟುನಿಟ್ಟು ಜಾರಿ :ಶಬ್ದ ಮಾಲಿನ್ಯದ ನಿಯಂತ್ರಣಕ್ಕಾಗಿ ಧ್ವನಿವರ್ಧಕ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಸುಪ್ರೀಂಕೋರ್ಟಿನ ಆದೇಶದಂತೆ, ರಾಜ್ಯದಲ್ಲಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಕಟ್ಟುನಿಟ್ಟಿನ ಜಾರಿಗೆ ಕ್ರಮ ವಹಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು.