ಕರ್ನಾಟಕ

karnataka

ETV Bharat / city

ಹೊರ ರಾಜ್ಯಗಳಿಂದ ತರಿಸುವ ಖನಿಜಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ - ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮ

ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಜಲ್ಲಿ, ಕಲ್ಲು, ಎಂ.ಸ್ಯಾಂಡ್​​ ಮೇಲೆ ತೆರಿಗೆ ವಿಧಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಹೈಕೋರ್ಟ್​ ತೀರ್ಪು ನೀಡಿದೆ.

High court
ಹೈಕೋರ್ಟ್

By

Published : Jan 7, 2021, 8:46 PM IST

ಬೆಂಗಳೂರು: ಹೊರ ರಾಜ್ಯಗಳಿಂದ ತರಿಸಿಕೊಳ್ಳುವ ಜಲ್ಲಿಕಲ್ಲು ಹಾಗೂ ಎಂ ಸ್ಯಾಂಡ್​ಗೆ ತೆರಿಗೆ ವಿಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಜಲ್ಲಿಕಲ್ಲು, ಎಂ.ಸ್ಯಾಂಡ್​ಗೆ ತೆರಿಗೆ ವಿಧಿಸುವ ಸರ್ಕಾರದ ಕ್ರಮ ಪ್ರಶ್ನಿಸಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರು ಹಾಗೂ ಕರ್ನಾಟಕ ಟಿಪ್ಪರ್ಸ್ ಲಾರಿ ಮಾಲೀಕರ ಸಂಘ ಸಲ್ಲಿಸಿದ್ದ ಹಲವು ರಿಟ್ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ.

ಇದನ್ನೂ ಓದಿ:ವಿಪತ್ತು ನಿರ್ವಹಣಾ ಕಾಯ್ದೆ ಅನುಷ್ಠಾನಗೊಳಿಸಲು ಸರ್ಕಾರ ವಿಫಲ: ಹೈಕೋರ್ಟ್ ಗರಂ

ಅಲ್ಲದೆ, ರಾಜ್ಯ ಸರ್ಕಾರ ತೆರಿಗೆ ವಿಧಿಸಲೆಂದೇ ಕಾಯ್ದೆಗೆ ತಂದಿರುವ ತಿದ್ದುಪಡಿ ನಿಯಮವನ್ನು ಅನೂರ್ಜಿತಗೊಳಿಸಿದ್ದು, ತಿದ್ದುಪಡಿಯು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1957ಕ್ಕೆ ವಿರುದ್ಧವಾಗಿದೆ. ಕಾನೂನುಬದ್ದವಾಗಿ ತೆಗೆದ ಖನಿಜಕ್ಕೆ ಅಂತಾರಾಜ್ಯ ತೆರಿಗೆ ವಿಧಿಸುವಂತಿಲ್ಲ. ಹಾಗೆಯೇ, ರಾಜ್ಯ ಸರಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರವಿಲ್ಲ ಎಂದು ತೀರ್ಪು ನೀಡಿದೆ.

ರಾಜ್ಯ ಸರ್ಕಾರ, ಹೊರ ರಾಜ್ಯಗಳಿಂದ ರಾಜ್ಯಕ್ಕೆ ಸಾಗಣೆ ಮಾಡುವ ಉಪ ಖನಿಜಗಳಿಗೆ ಪ್ರವೇಶ ಶುಲ್ಕ ವಿಧಿಸಲು 2020ರ ಜೂ.30ರಂದು ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮ 1994ರ ಸೆಕ್ಷನ್ 42(7)ಕ್ಕೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ತಾವು ಅಧಿಕೃತವಾಗಿ ಪರವಾನಗಿ ಪಡೆದು ಜಲ್ಲಿ ಕಲ್ಲು, ಎಂ.ಸ್ಯಾಂಡ್ ಗಣಿಗಾರಿಕೆ ನಡೆಸುತ್ತಿದ್ದೇವೆ ಮತ್ತು ಸಾಗಣೆ ಮಾಡುತ್ತಿದ್ದೇವೆ. ಆದರೆ, ಕರ್ನಾಟಕ ಸರಕಾರ ಅವುಗಳನ್ನು ರಾಜ್ಯದೊಳಗೆ ತರಲು ಶುಲ್ಕ ವಿಧಿಸುತ್ತಿರುವುದು ಕಾನೂನು ಬಾಹಿರ ಹಾಗೂ ಸಂವಿಧಾನದ ವಿಧಿ 301ರ ಉಲ್ಲಂಘನೆಯಾಗಿದೆ. ಅಲ್ಲದೆ, ರಾಜ್ಯದ ತಿದ್ದುಪಡಿ ಆದೇಶ ಕೇಂದ್ರದ ಗಣಿ ನಿಯಮಕ್ಕೂ ವಿರುದ್ಧವಾಗಿದೆ. ಆದ್ದರಿಂದ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.

ABOUT THE AUTHOR

...view details