ಬೆಂಗಳೂರು: ರಾಜ್ಯಾದ್ಯಂತ ಮರಳು, ಗ್ರಾನೈಟ್ ಗಣಿಗಾರಿಕೆ ಸೇರಿದಂತೆ ಅನೇಕ ರೀತಿಯ ಗಣಿಗಾರಿಕೆ ನಡೆಯುತ್ತಿದೆ. ಆದರೆ, ಸರ್ಕಾರಕ್ಕೆ ಬರಬೇಕಾದ ರೀತಿಯಲ್ಲಿ ಆದಾಯ ಬರುತ್ತಿಲ್ಲ. ಗಣಿ ಮಾಲೀಕರು ರಾಜಧನ ಕಟ್ಟುತ್ತಿಲ್ಲ ಎಂಬ ಆರೋಪ ಕೇಳಿ ಬಂದಿವೆ.
ಗಣಿಗಾರಿಕೆ, ಕಲ್ಲು ಕ್ವಾರಿ, ಮರಳು ದಂಧೆ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ರಾಜಧನ ಕಳ್ಳಕಾಕರರ ಪಾಲಾಗುತ್ತಿದೆ. ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿರುವುದೇ ಅದಕ್ಕೆ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಅರಣ್ಯನಾಶ, ಪರಿಸರ ನಾಶದ ಜತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಮತ್ತೊಂದೆಡೆ ಗ್ರಾಮಗಳ, ಶಾಲಾ-ಕಾಲೇಜುಗಳ ಸಮೀಪದಲ್ಲೇ ಕಲ್ಲು ಗಣಿಗಾರಿಕೆ ಹೆಚ್ಚು ನಡೆಯುತ್ತಿದ್ದು, ಧೂಳು, ಶಬ್ದ ಹಾಗೂ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವ ಪ್ರಸಂಗಗಳು ಸಾಕಷ್ಟಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತಿಹಾಸ ಸಾರುವ ಬೆಟ್ಟ-ಗುಡ್ಡಗಳು ಕಲ್ಲುಗಣಿಗಾರಿಕೆಯಿಂದ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿವೆ. ಜಿಲ್ಲೆಯಲ್ಲಿ ಮರಳು ದಂಧೆ ಹೆಚ್ಚಾಗಿ ನಡೆಯುತ್ತಿತ್ತು. ಅದೀಗ ಗಣಿಗಾರಿಕೆಯಾಗಿ ಪರಿವರ್ತನೆಯಾಗಿದೆ. 170ಕ್ಕೂ ಅಧಿಕ ಕಡೆ ಗಣಿ ಗುತ್ತಿಗೆ ಪಡೆದುಕೊಂಡು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ.
ಇದರಿಂದ ವಾರ್ಷಿಕ ₹60 ಕೋಟಿಗೂ ಅಧಿಕ ಸರ್ಕಾರದ ಬೊಕ್ಕಸಕ್ಕೆ ತುಂಬಿಸಲಾಗುತ್ತಿದೆ. ಕಳೆದ ವರ್ಷ 45 ಕೋಟಿ ಸಂಗ್ರಹಿಸಲಾಗಿತ್ತು. ಈ ವರ್ಷ ಕೊರೊನಾ ಕಾರಣ ರಾಜಧನ ಸಂಗ್ರಹಿಸಲು ಅಧಿಕಾರಿ ವರ್ಗ ವಿಫಲವಾಗಿದ್ದು, ಕೇವಲ ₹17 ಕೋಟಿ ಸಂಗ್ರಹವಾಗಿದೆ.
ಮಂಡ್ಯ ತಾಲೂಕಿನ ಆನುಕುಪ್ಪೆ ಗ್ರಾಮದಲ್ಲಿ ಯಥೇಚ್ಛವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ, ಮನೆಗಳು ಬಿರುಕು ಬಿಡುತ್ತಿವೆ. ಗ್ರಾಮದ ಅನತಿ ದೂರದಲ್ಲೇ ನಡೆಯುತ್ತಿರುವ ಕಲ್ಲು ಕ್ವಾರಿಯಲ್ಲಿ ರಾತ್ರಿ ವೇಳೆ ಸ್ಫೋಟಕ ಸಿಡಿಸುವುದರಿಂದ ಮನೆಗಳು ಡ್ಯಾಮೇಜ್ ಆಗಿವೆ. 10ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡಲು ಆತಂಕಗೊಂಡಿವೆ. ಗಣಿಗಾರಿಕೆಯಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಶಂಕೆಯಿದ್ದು, ಸಮಸ್ಯೆ ಉಲ್ಬಣಗೊಂಡರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಬಳ್ಳಾರಿ, ಬೆಂಗಳೂರು ವ್ಯಾಪ್ತಿ, ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಅಮೃತ ಮಹಲ್, ಕಪ್ಪತಗುಡ್ಡ, ಕೋಲಾರ, ತುಮಕೂರು, ಕೊಪ್ಪಳದಲ್ಲಿ ಗಣಿಗಾರಿಕೆ ಮತ್ತು ವಿಜಯಪುರ, ರಾಯಚೂರು, ಯಾದಗಿರಿ ಹಾಗೂ ಮಂಗಳೂರು ಸೇರಿದಂತೆ ಹಲವೆಡೆ ಮರಳು ದಂಧೆ ನಡೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಅಧಿಕಾರಿ ವರ್ಗ ವಿಫಲಗೊಂಡಿದೆ.
ರಾಜ್ಯದಲ್ಲಿ ಗಣಿಗಾರಿಕೆ ಕುರಿತ ವರದಿ ನಿಯಮ ಮೀರಿ, ಪ್ರಕೃತಿಗೆ ವಿರುದ್ಧವಾಗಿ ಗಣಿಗಾರಿಕೆ ಮಾಡಬಾರದೆಂಬ ಆದೇಶವಿದೆ. ಗಣಿಗಾರಿಕೆ ಧೂಳಿನಿಂದ ಸುತ್ತಲಿನ ಕೃಷಿ ಭೂಮಿ ಮುಚ್ಚಿ ಹೋಗುತ್ತಿವೆ. ಸಮುದಾಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಗಣಿಗಾರಿಕೆಗೆ ಅನುಮತಿ ಪಡೆದಿರುವುದಕ್ಕಿಂತ ಹೆಚ್ಚಿನ ಪಟ್ಟು ಕ್ವಾರಿ ಬಗೆದಿರುವುದು ಕಂಡು ಬರುತ್ತದೆ. ಹಾಗೆಯೇ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಾಕಷ್ಟು ತಂತ್ರಜ್ಞಾನ ಬಂದಿವೆ. ಆದರೆ, ಅವುಗಳ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ. ಈಗಲೂ ಹಳೆ ಯಂತ್ರ ಬಳಸಿಕೊಂಡು ಗಣಿಗಾರಿಕೆ ಮಾಡಲಾಗುತ್ತಿದೆ. ಸ್ಪೋಟಗಳಿಂದ ದೂರದಲ್ಲಿ ಸೃಷ್ಟಿಸುತ್ತಿರುವ ಕಂಪನ ಬಗ್ಗೆ ಗಮನ ಹರಿಸಬೇಕಿದೆ.