ಕರ್ನಾಟಕ

karnataka

ETV Bharat / city

ತೆರಿಗೆ ಹೆಸರಲ್ಲಿ ಪಾಲಿಕೆ ಅಧಿಕಾರಿಗಳಿಂದ ಮೀಟರ್ ಬಡ್ಡಿ ದಂಧೆ : ರಾಮಲಿಂಗಾ ರೆಡ್ಡಿ - Bangalore

ಬೆಂಗಳೂರು ಮಹಾನಗರ ಪಾಲಿಕೆ ಜನರ ಮೇಲೆ ಅವೈಜ್ಞಾನಿಕ ರೀತಿಯಲ್ಲಿ ತೆರಿಗೆ ಹಾಕುತ್ತಿದೆ. ಅಧಿಕಾರಿಗಳು 5 ವರ್ಷಗಳ ಹಿಂದೆ ವಲಯ ವಿಂಗಡಣೆಯನ್ನು ಸರಿಯಾಗಿ ಮಾಡದೆ ಜನರಲ್ಲಿ ಗೊಂದಲ ಮೂಡಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ..

Ramalinga Reddy allegations
ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿ

By

Published : Aug 7, 2021, 8:07 PM IST

ಬೆಂಗಳೂರು :ನಗರದಲ್ಲಿ 20 ಲಕ್ಷ ಆಸ್ತಿಗಳಿದ್ದು, ಅದರಲ್ಲಿ 18 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ ಪಾಲಿಕೆ ತಮ್ಮ ಅಧಿಕಾರಿಗಳ ತಪ್ಪಿನಿಂದ ಆಗಿರುವ ಅಚಾತುರ್ಯಕ್ಕೆ 78 ಸಾವಿರ ಆಸ್ತಿಗಳ ಮಾಲೀಕರಿಗೆ ತೆರಿಗೆ ಪಾವತಿ ಮಾಡಿಲ್ಲ ಎಂದು ಎರಡರಿಂದ ಮೂರು ಪಟ್ಟು ದುಬಾರಿ ದಂಡ ವಿಧಿಸಿದೆ.

ಈ ಆಸ್ತಿ ಮಾಲೀಕರಿಂದ 120 ಕೋಟಿ ರೂ. ತೆರಿಗೆ ಬಾಕಿ ಬರಬೇಕಾಗಿದೆ. ಅದಕ್ಕೆ 240 ರೂ. ಕೋಟಿ ಬಡ್ಡಿ ಹಾಕಿದ್ದಾರೆ. ಆ ಮೂಲಕ ಪಾಲಿಕೆ ಅಧಿಕಾರಿಗಳು ತೆರಿಗೆ ಹೆಸರಿನಲ್ಲಿ ಮೀಟರ್ ಬಡ್ಡಿ ದಂಧೆ ನಡೆಸಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.

ತೆರಿಗೆ ಹೆಸರಲ್ಲಿ ಪಾಲಿಕೆ ಅಧಿಕಾರಿಗಳಿಂದ ಮೀಟರ್ ಬಡ್ಡಿ ದಂಧೆ : ರಾಮಲಿಂಗಾ ರೆಡ್ಡಿ

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ರಾಮಲಿಂಗಾ ರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬೆಂಗಳೂರು ಮಹಾನಗರ ಪಾಲಿಕೆ ಜನರ ಮೇಲೆ ಅವೈಜ್ಞಾನಿಕ ರೀತಿಯಲ್ಲಿ ತೆರಿಗೆ ಹಾಕುತ್ತಿದೆ.

ಅಧಿಕಾರಿಗಳು 5 ವರ್ಷಗಳ ಹಿಂದೆ ವಲಯ ವಿಂಗಡಣೆಯನ್ನು ಸರಿಯಾಗಿ ಮಾಡದೆ ಜನರಲ್ಲಿ ಗೊಂದಲ ಮೂಡಿಸಿದ್ದಾರೆ. ಅಧಿಕಾರಿಗಳು ನಿಗದಿ ಮಾಡಿದ ವಲಯದಲ್ಲಿ ತೆರಿಗೆ ಪಾವತಿಸಿದ್ದಾರೆ. ಆದರೆ, ಈಗ ಅಧಿಕಾರಿಗಳು ನೀವು ಬೇರೆ ವಲಯಕ್ಕೆ ಅನ್ವಯವಾಗುವಂತೆ ತೆರಿಗೆ ಪಾವತಿ ಮಾಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಬಿಜೆಪಿ ಸರ್ಕಾರ ಕಾರಣ :ಅಧಿಕಾರಿಗಳಿಗೆ ಆಡಳಿತ ವಿಚಾರದಲ್ಲಿ ಮೇಯರ್ ಅವರ ಅಧಿಕಾರವನ್ನು ನೀಡಿರಬಹುದು. ಆದರೆ, ತೆರಿಗೆ ಹೆಚ್ಚಳ ವಿಚಾರದಲ್ಲಿ ಇದು ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ ಎಸ್ ಯಡಿಯೂರಪ್ಪ ಅವರ ಗಮನಕ್ಕೆ ಈ ವಿಚಾರ ಬಂದಿರುತ್ತದೆ. ಹೀಗಾಗಿ, ಈ ಮೀಟರ್ ಬಡ್ಡಿ ವ್ಯವಹಾರ ದಂಧೆಗೆ ಬಿಜೆಪಿ ಸರ್ಕಾರವೇ ಕಾರಣವಾಗಿದೆ.

ನಿರ್ಧಾರ ಹಿಂಪಡೆಯಬೇಕು :ಪಾಲಿಕೆ ಮೊದಲು ಈ ಬಡ್ಡಿ ದಂಧೆಯನ್ನು ನಿಲ್ಲಿಸಬೇಕು. ಪಾಲಿಕೆ ಅಧಿಕಾರಿಗಳು 2016ರಲ್ಲಿ ಸರಿಯಾಗಿ ವಲಯ ವರ್ಗೀಕರಣ ಮಾಡಿದ್ದರೆ, ಜನರು ಅದೇ ವಲಯದಲ್ಲಿ ತೆರಿಗೆ ಕಟ್ಟುತ್ತಿದ್ದರು. ಆದರೆ, ಇಂದು ಯಾವುದೇ ತಪ್ಪು ಮಾಡದ ಜನರಿಗೆ ಈ ರೀತಿಯಾಗಿ ಮೂರು ಪಟ್ಟು ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರವನ್ನು ಅಧಿಕಾರಿಗಳು ಹಿಂಪಡೆಯಬೇಕು. ಈ ನಿರ್ಧಾರ ಹಿಂಪಡೆಯದಿದ್ದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹಳೆಯ ಕಾಯ್ದೆ ಆಧಾರದ ಮೇಲೆ ನೋಟಿಸ್​​ :ಅಧಿಕಾರಿಗಳು ಈ ಹಿಂದೆ ಜಾರಿಯಲ್ಲಿದ್ದ ಕಾಯ್ದೆ ಆಧಾರವಾಗಿ ಜನರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಹಳೆಯ ಕಾಯ್ದೆಯಲ್ಲಿ ನೋಟಿಸ್​​ ಜಾರಿ ಮಾಡಲು ಕೇವಲ 3 ವರ್ಷಗಳ ಕಾಲಾವಕಾಶವಿದೆ. 3 ವರ್ಷಗಳ ಒಳಗಾಗಿ ಅವರು ನೋಟಿಸ್​ ನೀಡಬೇಕಾಗಿತ್ತು. ಆದರೆ, ನೀಡಿಲ್ಲ. ನೂತನ ಕಾಯ್ದೆಯಲ್ಲಿ ಇದನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆಯಾದರೂ, ಹಳೆಯ ಕಾಯ್ದೆ ಆಧಾರದ ಮೇಲೆ ನೋಟಿಸ್​​ ನೀಡಲಾಗಿದೆ. ಪಾಲಿಕೆ ಅಧಿಕಾರಿಗಳ ಈ ನಿರ್ಧಾರ ಮಹಾ ಅಪರಾಧವಾಗಿದೆ.

ವಲಯಗಳಾಗಿ ವಿಂಗಡಣೆ :ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪಾಲಿಕೆಯಲ್ಲಿಯೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಮೊದಲ ಬಾರಿಗೆ ಭ್ರಷ್ಟಾಚಾರ ನಿಯಂತ್ರಿಸಲು ಸ್ವಯಂ ಘೋಷಣಾ ಆಸ್ತಿ ತೆರಿಗೆ ಪದ್ಧತಿ ಜಾರಿಗೊಳಿಸಲಾಗಿತ್ತು. ಆಗ ಬೆಂಗಳೂರು ನಗರ ಪ್ರದೇಶವನ್ನು ತೆರಿಗೆ ಸಂಗ್ರಹಿಸಲು ಎ,ಬಿ,ಸಿ,ಡಿ,ಇ ಹಾಗೂ ಎಫ್ ವಲಯಗಳನ್ನಾಗಿ ವಿಂಗಡಿಸಲಾಗಿತ್ತು.

2016ರಲ್ಲಿ ಪಾಲಿಕೆಯು ಆಸ್ತಿ ತೆರಿಗೆ ಪರಿಷ್ಕರಿಸಿ ಯೂನಿಟ್ ದರಗಳನ್ನು ವಸತಿಗೆ ಶೇ.20ರಷ್ಟು ಹಾಗೂ ವಸತಿಯೇತರಕ್ಕೆ ಶೇ.25ರಷ್ಟು ಹೆಚ್ಚಳ ಮಾಡಿತ್ತು. ಆರಂಭದಲ್ಲಿ ಈ ತೆರಿಗೆ ಪಾವತಿ ಮಾಡುವ ತಂತ್ರಾಂಶಗಳಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಇದನ್ನು ಸರಿಪಡಿಸಲು ಅನೇಕ ದಿನಗಳ ಸಮಯ ತೆಗೆದುಕೊಳ್ಳಲಾಯಿತು. ಇದರಿಂದಾಗಿ 2016-17ನೇ ಸಾಲಿನಲ್ಲಿ ಕಡಿಮೆ ಆಸ್ತಿ ತೆರಿಗೆ ಮಾಡುವ ಮಾಲೀಕರು 2017-18ನೇ ಸಾಲಿನಲ್ಲಿ ಯಾವುದೇ ದಂಡ ಅಥವಾ ಬಡ್ಡಿ ಇಲ್ಲದೇ ತೆರಿಗೆ ಪಾವತಿ ಮಾಡಿರುತ್ತಾರೆ.

120 ಕೋಟಿ ರೂ.ವ್ಯತ್ಯಾಸ :ಆಸ್ತಿ ಮಾಲೀಕರು ತಮ್ಮ ವಲಯ ಗುರುತಿಸಲು ತೊಂದರೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ನೆರವನ್ನು ಪಡೆದು ಆಸ್ತಿ ತೆರಿಗೆ ಪಾವತಿ ಮಾಡಿರುತ್ತಾರೆ. ಈ ವೇಳೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ತೆರಿಗೆ ಸಂಗ್ರಹದಲ್ಲಿ 120 ಕೋಟಿಯಷ್ಟು ವ್ಯತ್ಯಾಸ ಕಂಡು ಬಂದಿದೆ.

ಕಳೆದ ಐದು ವರ್ಷಗಳಲ್ಲಿ ತಂತ್ರಾಂಶವನ್ನು ಸರಿಪಡಿಸಿಕೊಳ್ಳದ ಪಾಲಿಕೆ ಅಧಿಕಾರಿಗಳು 2021ರಲ್ಲಿ ತಂತ್ರಾಂಶ ಸರಿಪಡಿಸಿಕೊಂಡು ಈಗ ಕಡಿಮೆ ಆಸ್ತಿ ತೆರಿಗೆ ಪಾವತಿ ಮಾಡಿದವರಿಗೆ ಬಾಕಿ ತೆರಿಗೆ ಪಾವತಿ ಮಾಡುವುದರ ಜತೆಗೆ ಈ ಅವಧಿಗೆ ಮೂರು ಪಟ್ಟು ಬಡ್ಡಿ ವಿಧಿಸಿರುವುದು ಖಂಡನೀಯ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಯಾವುದೇ ತೆರಿಗೆ ಸಂಬಂಧಿತ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಬೇಕಾದರೆ ಆಗಿನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ವಾಸ್ತವ ಅಂಶವನ್ನು ಗಮನದಲ್ಲಿಟ್ಟುಕೊಂಡು ಪಾಲಿಕೆಯಲ್ಲಿ ಕೇವಲ ಶೇ.10ರಷ್ಟು ಮಾತ್ರ ಬದಲಾವಣೆ ಮಾಡಬೇಕು ಎಂಬ ಕಾನೂನು ಇದೆ. ನಗರಾಭಿವೃದ್ಧಿ ಸಚಿವನಾಗಿ ನನಗೂ ಸ್ವಲ್ಪ ಈ ಬಗ್ಗೆ ಅರಿವಿದೆ. ಈ ಬಗ್ಗೆ ನಮ್ಮ ಪಕ್ಷದಿಂದ ಸಮಗ್ರ ಅಧ್ಯಯನ ಮಾಡಲಾಗಿದೆ.

ಬೆಂಗಳೂರಿನಲ್ಲಿ ಪಾಲಿಕೆಯ ತಪ್ಪಿದ್ದರೂ 78 ಸಾವಿರ ಜನರಿಗೆ ನೋಟಿಸ್ ನೀಡಲಾಗಿದೆ. ಇಲ್ಲಿ ಸರ್ಕಾರಕ್ಕೆ ತೆರಿಗೆ ಪಾವತಿಸದವರಿಂದ ತೆರಿಗೆ ಸಂಗ್ರಹಿಸಲಿ, ಅದನ್ನು ಪ್ರಶ್ನಿಸುವುದಿಲ್ಲ. ಆದರೆ, ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ಮೇಲೆ ದೌರ್ಜನ್ಯ ನಡೆಸುವಂತಹ ನಿರ್ಧಾರ ಖಂಡಿಸುತ್ತೇವೆ. ಈ ರೀತಿ ದೌರ್ಜನ್ಯಕ್ಕೆ ಒಳಗಾಗುವ ಜನರ ರಕ್ಷಣೆಗೆ ನಾವು ಧಾವಿಸುತ್ತೇವೆ. ಈಗ ನೀಡಿರುವ ನೋಟಿಸ್ ಹಿಂಪಡೆಯಬೇಕು.

2020ರಲ್ಲಿ ಹೊಸ ಕಾಯ್ದೆ ತಂದ ಮೇಲೆ ಅದರ ಆಧಾರದ ಮೇಲೆ ಕ್ರಮಕೈಗೊಳ್ಳಬೇಕು. ಮಾತೆತ್ತಿದರೆ ಗುಜರಾತ್ ಮಾಡೆಲ್ ಎಂದು ಹೇಳುತ್ತಿರಾ?. ಹಾಗಾದರೆ, ಗುಜರಾತಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಮಾದರಿಯ ತೆರಿಗೆಯನ್ನು ಒಂದು ವರ್ಷಗಳ ಕಾಲ ಮನ್ನಾ ಮಾಡಲಾಗಿದೆ. ನೀವು ಕೂಡ ಅದೇ ರೀತಿ ಆಸ್ತಿ ಹಾಗೂ ವಾಣಿಜ್ಯ ತೆರಿಗೆಯನ್ನು ಮನ್ನಾ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

ABOUT THE AUTHOR

...view details