ಬೆಂಗಳೂರು:ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಮುಂದಿನ 3 ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಅಧಿಕ ಉಷ್ಣಾಂಶ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ಬಿಸಿಲ ಬೇಗೆಯಿಂದ ತತ್ತರಿಸಿರುವ ಜನರಿಗೆ ಮತ್ತಷ್ಟು ತಾಪಮಾನದ ಬಿಸಿ ತಾಗುತ್ತಿದೆ.
ವಾತಾವರಣದಲ್ಲಿ ಕಡಿಮೆ ತೇವಾಂಶದೊಂದಿಗೆ ಉತ್ತರದಿಂದ ದಕ್ಷಿಣದತ್ತ ಬಿಸಿ ಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲಿ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದೆ. ಮುಂದಿನ ಮೂರು ದಿನ ಮತ್ತಷ್ಟು ಉಷ್ಣಾಂಶ ಹೆಚ್ಚಳವಾಗಲಿದೆ. ರಾಯಚೂರಿನಲ್ಲಿ ಬುಧವಾರ 41 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಇಂದು ಕೂಡ 41 ಡಿಗ್ರಿ ವರದಿಯಾಗಿದೆ. ಮುಂದಿನ ಮೂರು ದಿನಗಳಲ್ಲಿ 42 ಮತ್ತು 43 ಡಿಗ್ರಿ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಲಬುರಗಿಯಲ್ಲಿ ಬುಧವಾರ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇಂದು 40 ಡಿಗ್ರಿ ವರದಿಯಾಗಿದೆ. ಇದು ಮುಂದಿನ ದಿನಗಳಲ್ಲಿ 42 ಡಿಗ್ರಿಗೆ ಏರಲಿದೆ ಎನ್ನುವ ಮಾಹಿತಿಯನ್ನು ಇಲಾಖೆ ನೀಡಿದೆ.
ಉತ್ತರದಲ್ಲಿ ಬಿಸಿ ವಾತಾವರಣ:ಯಾದಗಿರಿ, ಧಾರವಾಡ, ಕೊಪ್ಪಳ, ಗದಗ, ಬೀದರ್, ವಿಜಯಪುರ ಮತ್ತು ರಾಯಚೂರು ಸೇರಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 40ರ ಆಸುಪಾಸಿನಲ್ಲಿದೆ. ರಾಜ್ಯ ರಾಜಧಾನಿ ಬೆಂಗಳೂರಿಗೂ ತಾಪಮಾನ ಬಿಸಿ ತಾಗಿದೆ. ಉದ್ಯಾನನಗರಿ, ಕೂಲ್ ಸಿಟಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಬುಧವಾರ 34 ಡಿಗ್ರಿ ತಾಪಮಾನ ದಾಖಲಾಗಿದೆ. ಇಂದು 34 ಡಿಗ್ರಿವರೆಗೂ ದಾಖಲಾಗಿದೆ. ಇನ್ನೆರಡು ದಿನ ಇದೇ ಪ್ರಮಾಣದ ತಾಪಮಾನ ಇರಲಿದ್ದು, ಮೂರನೇ ದಿನ 33 ಡಿಗ್ರಿಗೆ ಇಳಿಕೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದಕ್ಷಿಣ ಕರ್ನಾಟಕದಲ್ಲಿ ಕಡಿಮೆ:ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ತುಮಕೂರು, ಚಾಮರಾಜನಗರ ಹಾಗೂ ಹಾಸನದಲ್ಲಿಯೂ ಪ್ರತಿದಿನ 35 ಡಿಗ್ರಿ ಸಮೀಪದಲ್ಲಿ ತಾಪಮಾನವಿದೆ. ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕದಲ್ಲಿ ತಾಪಮಾನ ಕಡಿಮೆ ಇದ್ದರೂ ಇಲ್ಲಿನ ವಾತಾವರಣಕ್ಕೆ ಈ ಉಷ್ಣಾಂಶ ಅಧಿಕವಾಗಿದ್ದು ಜನರು ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ.
ಇದನ್ನೂ ಓದಿ:ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ: ಸುದೀಪ್ ಮಾತಿಗೆ ಧ್ವನಿಗೂಡಿಸಿದ ಕನ್ನಡ ತಾರೆಯರು