ಬೆಂಗಳೂರು:ರಾಜ್ಯದಲ್ಲಿ ಮಳೆಯ ಪ್ರಮಾಣ ಕೊಂಚ ಇಳಿಕೆಯಾಗಲಿದೆ. ಕರಾವಳಿ ಜಿಲ್ಲೆಗಳಿಗೆ ಮುಂದಿನ 48 ಗಂಟೆಗಳ ಕಾಲ ರೆಡ್ ಅಲರ್ಟ್ ಬದಲಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಗುರುವಾರದಿಂದ ಕರಾವಳಿಗೆ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಮತ್ತು ನಾಳೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಆರೆಂಜ್ ಅಲರ್ಟ್ನಲ್ಲಿ 115 ಮಿ.ಮೀ.ನಿಂದ 204 ಮಿ.ಮೀ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜುಲೈ 14 ರಿಂದ 16 ರಿಂದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದಿದೆ.
ಪಶ್ಚಿಮ ಘಟ್ಟದ ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿಗೆ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ನೀಡಲಾಗಿದೆ. ಜುಲೈ 14 ರಿಂದ 16 ಹಾಸನ ಸೇರಿದಂತೆ ಪಶ್ಚಿಮ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಇರಲಿದೆ ಎಂದು ಮಾಹಿತಿ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ತಗ್ಗಿದ ಮಳೆ:ಉತ್ತರ ಕರ್ನಾಟಕದ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಇಂದು ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ ಹೊರತುಪಡಿಸಿ ಇತರೆ ಜಿಲ್ಲೆಗಳಿಗೆ ನಾಳೆಯಿಂದ ಮಳೆಯಾಗುವ ಸಾಧ್ಯತೆ ಕಡಿಮೆಯಿದೆ ಎಂದು ಮಾಹಿತಿ ನೀಡಿದೆ.
ಓದಿ:ಆಲಮಟ್ಟಿಯ 18 ಗೇಟ್‌ಗಳ ಮೂಲಕ ನೀರು ಬಿಡುಗಡೆ; ಹೆಚ್ಚಿದ ಪ್ರವಾಹ ಭೀತಿ