ಬೆಂಗಳೂರು: ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ವಿರುದ್ಧ ನಿರ್ಣಯ ಕೈಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಪಾಲನೆ ಮಾಡಬೇಕು ಜೊತೆಗೆ ರಾಜ್ಯದ ಬಿಜೆಪಿ ನಾಯಕರು ಈ ಕೂಡಲೇ ಕೇಂದ್ರದಿಂದ ಕ್ಲಿಯರೆನ್ಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 16/02/2018 ರಲ್ಲಿ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿದೆ. ಒಂದು ಸಾಮಾನ್ಯ ವರ್ಷದಲ್ಲಿ 177.25 ಟಿಎಂಸಿ ನೀರು ತಮಿಳುನಾಡಿಗೆ ಬಿಡುವಂತೆ ಆದೇಶ ಮಾಡಿದೆ. ಇದರ ನಿರ್ವಹಣೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಸ್ತಿತ್ವದಲ್ಲಿದೆ. ಇಷ್ಟು ಪ್ರಮಾಣದ ನೀರು ಪಡೆಯುವುದು ಮಾತ್ರ ತಮಿಳುನಾಡಿಗಿರುವ ಹಕ್ಕು. ಈ ತೀರ್ಪು ಬಂದ ಮೇಲೆ ಸುಮಾರು 400 ಟಿ.ಎಂ.ಸಿ ಗೂ ಅಧಿಕ ನೀರು ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿದು ಹೋಗಿದೆ. ಹಾಗಾಗಿ ಕೇಂದ್ರ ಸರ್ಕಾರ ಈ ಕೂಡಲೇ ಕ್ಲಿಯರೆನ್ಸ್ ನೀಡಬೇಕು ಎಂದು ಹೇಳಿದ್ದಾರೆ.
ನಮ್ಮ ಪಾಲಿನ ನೀರು, ವ್ಯರ್ಥವಾಗಿ ತಮಿಳುನಾಡಿಗೆ ಹೋಗುತ್ತಿದೆ. ತಮಿಳುನಾಡು ಮತ್ತು ಕರ್ನಾಟಕದ ನಡುವೆ ವಿವಾದವೇ ಇಲ್ಲ. ಈ ವಿಚಾರ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥವಾಗಿದೆ. ಕೇಂದ್ರ ಸರ್ಕಾರ ಇಚ್ಛಾಶಕ್ತಿ ಮತ್ತು ಒಕ್ಕೂಟ ಧರ್ಮದ ಪಾಲನೆ ಮಾಡಬೇಕು. ಬಹಳ ಹಿಂದೆಯೇ ಕ್ಲಿಯರೆನ್ಸ್ ನೀಡಬೇಕಿತ್ತು. ಅಂತೆಯೇ ಈ ಕೆಲಸ ಮಾಡಿ ಎಂದು ಮೊನ್ನೆ ಮುಖ್ಯಮಂತ್ರಿಗಳು ನಡೆಸಿದ ಸರ್ವ ಪಕ್ಷ ಸಭೆಯಲ್ಲಿ ಹೇಳಿದ್ದೇವೆ. ಅವರು ಕೂಡ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.