ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸುವಾಗ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಆರು ಜನ ಕಾಂಗ್ರೆಸ್ ನಾಯಕರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕೋವಿಡ್ ನಿಯಮ ಉಲ್ಲಂಘನೆಯಡಿ ಸಾಂಕ್ರಾಮಿಕ ರೋಗಗಳ ಕಾಯಿದೆಯ 5(3)ಎ, 143, 149, 290, 336, 141 ಅಡಿ ರಾಮನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಡಿಕೆಶಿ, ಸಲೀಂ ಅಹ್ಮದ್ ಸೇರಿ 29 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳಾದ ಡಿ.ಕೆ.ಶಿವಕುಮಾರ್, ಸಲೀಂ ಅಹ್ಮದ್, ಹೆಚ್.ಆಂಜನೇಯ, ಪರಮೇಶ್ವರ್ ನಾಯಕ್, ಕೆ.ರಾಜು ಮತ್ತು ಪಾರ್ವತಮ್ಮ ಅವರ ಹಾಜರಾತಿಯನ್ನು ಪರಿಗಣಿಸಿದ ನ್ಯಾಯಾಲಯವು ತಲಾ 50 ಸಾವಿರ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ಆರೋಪಿಗಳಿಗೆ ಆದೇಶಿಸಿ ಜಾಮೀನು ಮಂಜೂರು ಮಾಡಿದೆ.