ಬೆಂಗಳೂರು: ಪಕ್ಷದ ಎಲ್ಲ ಶಾಸಕರು ಮತ್ತು ಸಚಿವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು, ಪಕ್ಷ ಮತ್ತು ಸರ್ಕಾರದ ವರ್ಚಸ್ಸನ್ನು ವೃದ್ಧಿಗೊಳಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದ್ದು, ಗ್ರಾ.ಪಂ ಮಾದರಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಎದುರಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಉಪಚುನಾವಣೆಗೆ ತಯಾರಿ ಮಾಡಿಕೊಳ್ಳುವ ಬಗ್ಗೆ ಇಂದು ಸುದೀರ್ಘ ಚರ್ಚೆ ಮಾಡಿದ್ದೇವೆ, ಇತ್ತೀಚೆಗೆ ನಡೆದ ಉಪಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಮುಂದೆ ಏನೆಲ್ಲ ಬದಲಾವಣೆ ಮಾಡಿಕೊಳ್ಳಬೇಕು, ಗೆದ್ದ ಕಡೆ ಅಂತರ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಮತ್ತು ಸೋತ ಕಡೆ ಅಭ್ಯರ್ಥಿಯನ್ನು ಯಾವ ರೀತಿ ತಯಾರು ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾವು ಗ್ರಾಮ ಸ್ವರಾಜ್ಯ ಯಾತ್ರೆ ಮಾಡಿದ್ದೆವು, ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದೆವು, ಅದರ ಪ್ರಕಾರ ಇಡೀ ರಾಜ್ಯದಲ್ಲಿ ಗ್ರಾಮ ಪಂಚಾಯತ್ ನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯಿತು ಹಾಗಾಗಿ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಲ್ಲಿಯೂ ಅದೇ ಮಾದರಿ ಅನುಸರಿಸಲು ನಿರ್ಧರಿಸಲಾಗಿದೆ, ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿ ಕಳೆದ ಬಾರಿಗಿಂತಲೂ ಎರಡುಪಟ್ಟು ಹೆಚ್ಚಿನ ಸ್ಥಾನಗಳನ್ನು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಲ್ಲಿ ಗೆಲ್ಲಲು ತಯಾರಿ ಮಾಡಲು ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.
ಎಲ್ಲ ಶಾಸಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕುರಿತು ಎಲ್ಲರನ್ನು ಕರೆದು ಮಾತನಾಡಲು ನಿರ್ಧರಿಸಲಾಗಿದೆ, ಎಲ್ಲ ಮಂತ್ರಿಗಳನ್ನು ಕರೆದು ಪಕ್ಷದ ವರ್ಚಸ್ಸು ವೃದ್ದಿಸಲು, ಪಕ್ಷ,ಸರ್ಕಾರಕ್ಕೆ ಇಮೇಜ್ ಬೆಳೆಸಲು ಏನೇನು ತಯಾರಿ ಮಾಡಬೇಕು ಎಂದು ಚರ್ಚಿಸಿದ್ದೇವೆ, ಪ್ರತಿ ತಿಂಗಳೂ ಇಂತಹ ಸಭೆ ಮಾಡಲಿದ್ದೇವೆ, ಸಿಎಂ, ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ಮಾಡಿ, ಪಕ್ಷ ಮತ್ತಷ್ಟು ಬಲಶಾಲಿಯಾಗಲು ಕ್ರಮವಹಿಸಲು ನಿರ್ಧರಿಸಲಾಯಿತು ಎಂದು ಹೇಳಿದರು.
ಶಾಸಕಾಂಗ ಸಭೆ ಬಗ್ಗೆ ಚರ್ಚಿಸಿಲ್ಲ:
ಪಕ್ಷದ ಶಾಸಕಾಂಗ ಸಭೆ ಕರೆಯುವ ಕುರಿತು ಇಂದಿನ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಆದರೆ, ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಚರ್ಚಿಸಲಾಗಿದೆ, ಸಚಿವರು ಕೂಡ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಹೇಳಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.