ಕರ್ನಾಟಕ

karnataka

By

Published : Feb 17, 2021, 7:46 AM IST

ETV Bharat / city

ಎಸ್‍ಡಿಪಿ ಅನುದಾನ ಬಳಕೆಗೆ ಮುಂದಿನ ಮೂರು ವರ್ಷದ ಪ್ಲಾನ್ ಸಿದ್ಧಪಡಿಸಿ: ಸಚಿವ ನಾರಾಯಣ ಗೌಡ

2018 ರಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನೀಡಿದ ವರದಿ ಪ್ರಕಾರ 12 ವರ್ಷ ಕಳೆದರೂ ಇನ್ನೂ 96 ತಾಲೂಕುಗಳು ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲೇ ಇವೆ. ಸಾವಿರಾರು ಕೋಟಿ ರೂಪಾಯಿ ಅನುದಾನ ಬಳಸಿದರೂ ಯಾವುದೇ ರೀತಿಯ ಅಭಿವೃದ್ಧಿ ಆಗದಿರುವುದಕ್ಕೆ ತೀವ್ರ ಯುಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

meeting
ಸಚಿವ ನಾರಾಯಣಗೌಡ

ಬೆಂಗಳೂರು:ವಿಶೇಷ ಅಭಿವೃದ್ಧಿ ಯೋಜನೆಯಡಿ ಕಳೆದ 12 ವರ್ಷಗಳಲ್ಲಿ 37,124.35 ಕೋಟಿ ರೂ. ಅನುದಾನ ನೀಡಿದರೂ ಸಮರ್ಪಕ ರೀತಿಯಲ್ಲಿ ಅನುಷ್ಠಾನವಾಗದಿರುವ ಬಗ್ಗೆ ಸಚಿವ ನಾರಾಯಣ ಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಕಾಸಸೌಧದಲ್ಲಿ 12 ವರ್ಷಗಳಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸಭೆ ನಡೆಸಿದ ಅವರು, ಇಚ್ಛಾಶಕ್ತಿ ಕೊರತೆಯಿಂದ ಎಷ್ಟು ಕೋಟಿ ಅನುದಾನ ನೀಡಿದ್ದರೂ ಅಭಿವೃದ್ಧಿ ಮಾತ್ರ ಕಣ್ಣಿಗೆ ಕಾಣುತ್ತಿಲ್ಲ. ಡಾ. ನಂಜುಂಡಪ್ಪ ವರದಿಯಂತೆ ಅನುದಾನವೂ ಹಂಚಿಕೆಯಾಗಿಲ್ಲ. ಹೀಗಾಗಿ 12 ವರ್ಷಗಳಲ್ಲಿ ಹಿಂದುಳಿದ ತಾಲೂಕುಗಳು ಅದೇ ಸ್ಥಿತಿಯಲ್ಲೇ ಇವೆ. ನಂಜುಂಡಪ್ಪ ವರದಿ ಪ್ರಕಾರ ಶಿಕ್ಷಣ, ಆರೋಗ್ಯ, ಉದ್ದಿಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಿತ್ತು. ಆದರೆ ಈ ವಲಯಗಳಿಗೆ ಸರಿಯಾದ ರೀತಿಯಲ್ಲಿ ಅನುದಾನ ಹಂಚಿಕೆಯೇ ಆಗಿಲ್ಲ ಎಂದರು.

ಡಾ. ನಂಜುಂಡಪ್ಪ ವರದಿಯಂತೆ ರಾಜ್ಯದ 176 ತಾಲೂಕುಗಳ ಪೈಕಿ 114 ತಾಲೂಕು ಹಿಂದುಳಿದಿವೆ. 2018 ರಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನೀಡಿದ ವರದಿ ಪ್ರಕಾರ 12 ವರ್ಷ ಕಳೆದರೂ ಇನ್ನೂ 96 ತಾಲೂಕುಗಳು ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲೇ ಇವೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಕಿಅಂಶಗಳನ್ನ ಗಮನಿಸಿದ ಸಚಿವರು ಸಾವಿರಾರು ಕೋಟಿ ರೂಪಾಯಿ ಅನುದಾನ ಬಳಸಿದರೂ ಯಾವುದೇ ರೀತಿಯ ಅಭಿವೃದ್ಧಿ ಆಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹಿಂದುಳಿದ ತಾಲೂಕುಗಳ ಶಾಲೆ, ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಲೈಬ್ರರಿ, ಶೌಚಾಲಯ, ತರಗತಿ ಕೊಠಡಿ, ಲ್ಯಾಬ್, ಕಂಪ್ಯೂಟರ್ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆಯೇ ಹೆಚ್ಚಾಗಿದೆ. 2007-08 ರಿಂದ ಇದುವರೆಗೆ 37,124.35 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಅದರಲ್ಲಿ 27,346.32 ಕೋಟಿ ಅನುದಾನ ಬಳಕೆಯಾಗಿದೆ. ಆದಾಗ್ಯೂ ಹಿಂದುಳಿದ ತಾಲೂಕುಗಳ ಹಣೆಬರಹ ಮಾತ್ರ ಬದಲಾಗಿಲ್ಲ. ಮೌಲ್ಯಮಾಪನ ಪ್ರಾಧಿಕಾರದ ಪ್ರಕಾರ ಬೆಂಗಳೂರು ವಿಭಾಗದಲ್ಲಿ 8 ತಾಲೂಕುಗಳು, ಬೆಳಗಾವಿ ವಿಭಾಗದ 3, ಕಲಬುರ್ಗಿ ವಿಭಾಗದ 18 ತಾಲೂಕುಗಳು ಸೇರಿದಂತೆ ಒಟ್ಟು 29 ತಾಲೂಕುಗಳು ಅತ್ಯಂತ ಹಿಂದುಳಿದಿವೆ. 24 ತಾಲೂಕುಗಳು ಅತಿ ಹಿಂದುಳಿದಿದ್ದು, 43 ತಾಲೂಕುಗಳು ಹಿಂದುಳಿದಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆದ್ಯತಾ ವಲಯಕ್ಕೆ ಅನುದಾನ ಬಳಕೆ ಇಲ್ಲ:

ಡಾ. ನಂಜುಂಡಪ್ಪ ವರದಿಯಂತೆ ಆದ್ಯತಾ ವಲಯಕ್ಕೆ ಹೆಚ್ಚಿನ ಅನುದಾನ ಬಳಕೆಯಾಗಬೇಕಿತ್ತು. ಆದರೆ, ಶಿಕ್ಷಣಕ್ಕೆ ಶೇ.5, ಆರೋಗ್ಯಕ್ಕೆ ಶೇ.5, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶೇ1.6, ಕೃಷಿ ಶೇ6.05, ಉದ್ಯಮಕ್ಕೆ ಶೇ0.89 ಅನುದಾನ ಬಳಕೆಯಾಗಿದೆ. ಆದ್ಯತೆ ಮೇರೆಗೆ ಹಂಚಿಕೆಯಾದ ಅನುದಾನದ ಶೇ. 50 ರಷ್ಟಾದರೂ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ಈ ಐದು ಪ್ರಮುಖ ವಿಭಾಗಕ್ಕೆ ಬಳಸಬೇಕಾಗಿತ್ತು. ಆದರೆ ಅನುದಾನ ಬಳಕೆಗೆ ಸ್ಪಷ್ಟ ನಿಯಮ ಇಲ್ಲದ ಕಾರಣ ಪ್ರಮುಖ ಐದು ವಿಭಾಗಕ್ಕೆ ಬಳಕೆ ಆಗದೇ ಇರುವುದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಮನಕ್ಕೆ ಬಂತು.

ವಸತಿ, ಜಲಸಂಪನ್ಮೂಲ, ಸಣ್ಣ ನೀರಾವರಿಗೆ ಹೆಚ್ಚಿನ ಅನುದಾನ:

ಹಿಂದುಳಿದ ತಾಲೂಕುಗಳಲ್ಲಿ ವಸತಿ, ಗ್ರಾಮೀಣ ಗೃಹ ನಿರ್ಮಾಣ, ಜಲಂಪನ್ಮೂಲ, ಸಣ್ಣ ನೀರಾವರಿ ಇಲಾಖೆಯಡಿ ಹೆಚ್ಚಿನ ಅನುದಾನ ಬಳಕೆಯಾಗಿದೆ. ಈ ಇಲಾಖೆಗಳಡಿ 11 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಬಳಕೆಯಾಗಿದೆ. ಪ್ರತಿಯೊಂದು ಇಲಾಖೆಗೆ ಒದಗಿಸುವ ಅನುದಾನದಲ್ಲೇ ಎಸ್​ಡಿಪಿಗೆ ಅನುದಾನ ನಿಗದಿಪಡಿಸಲಾಗುತ್ತಿದೆ. ಇದರಿಂದಾಗಿ ಎಲ್ಲ ತಾಲೂಕುಗಳ ಅಭಿವೃದ್ಧಿಗೆ ಅನುದಾನ ಬಳಸಿದಂತೆ ಇಲ್ಲೂ ಬಳಸಿದ್ದು ಬಿಟ್ಟರೆ, ವಿಶೇಷ ಅನುದಾನದ ಸಮರ್ಪಕ ಬಳಕೆ ಆಗಲೇ ಇಲ್ಲ. 2007-08 ರಿಂದ ಮುಂದಿನ 8 ವರ್ಷಗಳ ವರೆಗೆ ಸಾಮಾನ್ಯ ಕಾರ್ಯಕ್ರಮಗಳಿಂದ 15 ಸಾವಿರ ಕೋಟಿ ರೂ. ಹಾಗೂ ಹೆಚ್ಚುವರಿಯಾಗಿ 16 ಸಾವಿರ ಕೋಟಿ ರೂ. ಹಣವನ್ನ ವಿಶೇಷ ಅಭಿವೃದ್ಧಿ ಯೋಜನೆ ಮೂಲಕ ಬಳಕೆ ಮಾಡಬೇಕು ಎಂಬ ಗುರಿ ಹೊಂದಲಾಗಿತ್ತು.

ಮೂರು ವರ್ಷದ ಪ್ಲಾನ್ ಸಿದ್ಧಮಾಡಿ:

ಇನ್ನು ಮುಂದೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಹಂಚಿಕೆಯಾಗುವ ಅನುದಾನದ ಬಳಕೆಗೆ ಸ್ಪಷ್ಟ ನಿಯಮ ರೂಪಿಸಲು ಸಚಿವರು ಸೂಚಿಸಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉದ್ಯಮ ವಲಯ ಸೇರಿದಂತೆ ಹಿಂದುಳಿದ ತಾಲೂಕುಗಳಲ್ಲಿ ಏನೇನು ಕೆಲಸ ಆಗಬೇಕು, ಬೇಕಾಗುವ ಅನುದಾನವೆಷ್ಟು ಎನ್ನುವುದರ ಕ್ರಿಯಾಯೋಜನೆ ಸಿದ್ಧಪಡಿಸಿ ನೀಡುವಂತೆ ಸಚಿವರು ಸೂಚಿಸಿದ್ದಾರೆ. ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಸಣ್ಣನೀರಾವರಿ, ಉನ್ನತ ಶಿಕ್ಷಣ, ಇಂಧನ ಇಲಾಖೆ, ತೋಟಗಾರಿಕೆ ಸೇರಿಂದತೆ ಎಲ್ಲ 17 ಇಲಾಖೆಗಳ ಅಧಿಕಾರಿಗಳ ಜೊತೆ ವಿಶೇಷ ಅಭಿವೃದ್ಧಿ ಯೋಜನೆಯ ಸಂಬಂಧ ಸಚಿವರು ಸಭೆ ನಡೆಸಿದರು. ಎಸ್‍ಡಿಪಿ ಅಡಿಯಲ್ಲಿ ಹಂಚಿಕೆ ಆಗುವ ಅನುದಾನ ಸರಿಯಾಗಿ ಬಳಕೆಯಾಗಬೇಕು. ಸಾಮಾನ್ಯ ಅನುದಾನದಲ್ಲಿ ಈ ಅನುದಾನವನ್ನು ಸೇರಿಸುವಂತಿಲ್ಲ ಹಾಗೂ ಪ್ರತಿ ಇಲಾಖೆಗೆ ಹಂಚಿಕೆಯಾಗಿರುವ ಅನುದಾನ ಅಲ್ಲಿಯೇ ಸಮರ್ಪಕವಾಗಿ ವೆಚ್ಚವಾಗಬೇಕು ಎಂದು ಸೂಚಿಸಿದ್ದಾರೆ.

ABOUT THE AUTHOR

...view details