ಬೆಂಗಳೂರು: ಉಪಕಾರ ಸ್ಮರಣೆ ಇರಬೇಕು ಎಂದು ಸಲಹೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ ಸಹ ನನ್ನ ಅಳಿಲು ಸೇವೆಯನ್ನು ಮರೆತಿಲ್ಲ ಎಂದುಕೊಳ್ಳುತ್ತೇನೆ ಎಂದು ವಿನಯವಾಗಿಯೇ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಹಾಗು ಸಚಿವ ಸುಧಾಕರ್ ನಡುವೆ ಟ್ವೀಟ್ ಸಮರ ಮುಂದುವರೆದಿದೆ. ಆಡಳಿತ ಮತ್ತು ಪ್ರತಿಪಕ್ಷದ ನಡುವೆ ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಆರೋಪದ ನಡುವೆ ಉಭಯ ನಾಯಕರು ಪರಸ್ಪರ ಟ್ವೀಟ್ ಮೂಲಕ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಸಿದ್ದರಾಮಯ್ಯ ಅವರ ಟ್ವೀಟ್ಗೆ ಪ್ರತಿ ಟ್ವೀಟ್ ಮಾಡಿರುವ ಸುಧಾಕರ್, ಸಿದ್ದರಾಮಯ್ಯ ಅವರು ನಾನು ಅಧಿಕಾರದ ಅಹಂನಿಂದ ಮಾತನಾಡಿದ್ದೇನೆ ಮತ್ತು ನನಗೆ ಉಪಕಾರ ಸ್ಮರಣೆ ಇರಬೇಕು ಎಂದಿದ್ದಾರೆ. ಅವರು ಹಿಂದೆ ನೀಡಿರುವ ಸಹಕಾರ ಮತ್ತು ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತೇನೆ ಮತ್ತು ನನ್ನ ಅಳಿಲು ಸೇವೆಯನ್ನು ಅವರೂ ಸಹ ಮರೆತಿಲ್ಲ ಎಂದು ಭಾವಿಸುತ್ತೇನೆ ಎಂದು ಟಾಂಗ್ ನೀಡಿದ್ದಾರೆ.
5 ತಿಂಗಳಿಂದ ವೈದ್ಯಕೀಯ ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತು ಕಾರ್ಯಕ್ಷಮತೆಯಿಂದ ಅವಿರತವಾಗಿ ಶ್ರಮಿಸುತ್ತಿರುವ ಸನ್ನಿವೇಶದಲ್ಲಿ ನನ್ನ ಇಲಾಖೆಯ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳು ಅಂದಾಗ ಜವಾಬ್ದಾರಿಯುತವಾಗಿ ವಾಸ್ತವಾಂಶವನ್ನು ಜನರ ಮುಂದಿಟ್ಟಿದ್ದೇನೆ. ಇದರಲ್ಲಿ ಯಾವುದೇ ವೈಯಕ್ತಿಕ ನಿಂದನೆ ಅಥವಾ ಅಪಹಾಸ್ಯದ ಉದ್ದೇಶವಿಲ್ಲ ಎಂದು ಸಚಿವರ ಜಂಟಿ ಸುದ್ದಿಗೋಷ್ಠಿ ಸಮರ್ಥಿಸಿಕೊಂಡಿದ್ದಾರೆ.