ಬೆಂಗಳೂರು:ಮನೆಗಳಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ದೂರವಾಣಿ ಮೂಲಕ ವೈದ್ಯಕೀಯ ಸಲಹೆ (ಟೆಲಿ ಕನ್ಸೆಲ್ಟೆನ್ಸಿ) ನೀಡುವುದಕ್ಕೆ ವೈದ್ಯಕೀಯ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡುವ ಕುರಿತು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.
ಇನ್ನು ರಾಜ್ಯ ಕೋವಿಡ್ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ, ದೂರವಾಣಿ ಮೂಲಕ ವೈದ್ಯಕೀಯ ಸಲಹೆಯ ಪೂರ್ಣ ಜವಾಬ್ದಾರಿಯನ್ನು ಆಯಾ ವೈದ್ಯಕೀಯ ಕಾಲೇಜುಗಳ ಡೀನ್ಗಳಿಗೆ ವಹಿಸಲಾಗುತ್ತಿದ್ದು, ಇದರಲ್ಲಿ ಕರ್ತವ್ಯ ಲೋಪವಾದರೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೋವಿಡ್ ಹೋಮ್ ಐಸೋಲೇಷನ್ ವಿಭಾಗದ ಉಸ್ತುವಾರಿಯೂ ಆಗಿರುವ ಡಿಸಿಎಂ, ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ಜತೆ ಇಂದು ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದರು.
ಒಂದು ವೇಳೆ ಟೆಲಿ ಕನ್ಸೆಲ್ಟೆನ್ಸಿ ಸೇವೆಗೆ ವೈದ್ಯ ವಿದ್ಯಾರ್ಥಿಗಳು ಹಾಜರಾಗದಿದ್ದರೆ ಆಯಾ ಮೆಡಿಕಲ್ ಕಾಲೇಜ್ ಪ್ರಾಂಶುಪಾಲರು, ಡೀನ್ ಅಥವಾ ಮುಖ್ಯಸ್ಥರನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಟೆಲಿ ಕನ್ಸೆಲ್ಟೆನ್ಸಿ ಸೇವೆ ನೀಡಲು 7,000 ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ಪೈಕಿ 4,000 ಈ ಸೇವೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಕೇವಲ 700 ವಿದ್ಯಾರ್ಥಿಗಳು ಮಾತ್ರ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಉಳಿದವರೂ ಈ ಸೇವೆಗೆ ಕಡ್ಡಾಯವಾಗಿ ಹಾಜರಾಗಬೇಕು. ಈ ಜವಾಬ್ದಾರಿಯನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು ವಹಿಸಿಕೊಳ್ಳಬೇಕು ಹಾಗೂ ಕೆಲಸವನ್ನ ಆಯಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮುಖ್ಯಸ್ಥರೇ ಹಂಚಿಕೆ ಮಾಡಬೇಕು ಎಂದು ಡಿಸಿಎಂ ಸೂಚನೆ ನೀಡಿದರು.