ಬೆಂಗಳೂರು :ರಷ್ಯಾ ಮತ್ತು ಉಕ್ರೇನ್ನ ಹಲವು ನಗರಗಳಲ್ಲಿ ಬಹಳಷ್ಟು ಭಾರತೀಯರು ಸಿಲುಕಿದ್ದಾರೆ. ಅವರಿಗೆ ಏನೂ ಆಗಿಲ್ಲ. ಆದರೆ, ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲು ಮನವಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಉಕ್ರೇನ್, ರಷ್ಯಾ ಯುದ್ಧದಲ್ಲಿ ಹಲವರು ಕನ್ನಡಿಗರು ಸಿಕ್ಕಿಕೊಂಡಿದ್ದಾರೆ. ನಿನ್ನೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರ ಜತೆ ಮಾತನಾಡಿದ್ದೇನೆ. ಅವರಿಗೆ ನಮ್ಮವರ ಒಂದು ಲಿಸ್ಟ್ ಕಳಿಸಿಕೊಟ್ಟಿದ್ದೇವೆ ಎಂದು ಹೇಳಿದರು.
ನಮ್ಮ ಹೆಚ್ಚಿನ ವಿದ್ಯಾರ್ಥಿಗಳು ಪಶ್ಚಿಮ ಭಾಗದಲ್ಲಿದ್ದಾರೆ. ಅವರನ್ನು ಸುರಕ್ಷಿತವಾಗಿ ಇರುವಂತೆ ಸೂಚಿಸಲಾಗಿದೆ. ಶೀಘ್ರದಲ್ಲೇ ರಸ್ತೆ ಮಾರ್ಗ ಮತ್ತು ವಾಯು ಮಾರ್ಗದ ಮೂಲಕ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುತ್ತೇವೆ. ನಾನೂ ಕೂಡ ಕೆಲವು ವಿದ್ಯಾರ್ಥಿಗಳ ಜತೆ ಮಾತಾಡಿದ್ದೇನೆ. ಅವರಿಗೆ ಎಲ್ಲ ರೀತಿಯ ಧೈರ್ಯ ಹೇಳಿದ್ದೇನೆ ಎಂದು ಸಿಎಂ ವಿವರಿಸಿದ್ದಾರೆ.
ಇವತ್ತು ಭಾರತಕ್ಕೆ ಬರುತ್ತಿರುವವರಲ್ಲಿ ಕನ್ನಡಿಗರು ಇದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇವೆ. ಅವರೆಲ್ಲಾ ಭಾರತಕ್ಕೆ ಬಂದ ಮೇಲೆ ರಾಜ್ಯದವರು ಇದ್ದರೆ ಅವರನ್ನು ಅವರವರ ಊರುಗಳಿಗೆ ಸುರಕ್ಷಿತವಾಗಿ ಕಳುಹಿಸಿಕೊಡ್ತೇವೆ.