ಬೆಂಗಳೂರು:ಡಿ.ಕೆ.ಶಿವಕುಮಾರ್ ಕೂಡ 75 ವರ್ಷಕ್ಕೆ ಕಾರ್ಯಕ್ರಮ ಮಾಡಲಿ. ಈಗ ಅರವತ್ತು ವರ್ಷ ತುಂಬಿದೆ, ಷಷ್ಠಿಪೂರ್ತಿ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಸಂಬಂಧ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬವನ್ನು ಎಲ್ಲರೂ ಒಗ್ಗಟ್ಟಿನಿಂದ ಆಚರಿಸುತ್ತಿದ್ದೇವೆ.
ರಾಹುಲ್ ಗಾಂಧಿ ಕೂಡ ಭಾಗವಹಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಪೂರ್ವಭಾವಿ ಸಭೆಗೆ ಭಾಗಿಯಾಗಬೇಕಾದ ಅಗತ್ಯ ಇರಲಿಲ್ಲ. ಈಗಾಗಲೇ ಅವರು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುತ್ತಿದ್ದಾರೆ. ಸಿದ್ದರಾಮಯ್ಯ ಸಮಿತಿಯಿಂದ ಕಾರ್ಯಕ್ರಮ ಆಯೋಜನೆ ಆಗಿದೆ. ಕಾಂಗ್ರೆಸ್ ಪಕ್ಷ ಪೂರ್ತಿಯಾಗಿ ಇದರಲ್ಲಿ ಭಾಗಿಯಾಗುತ್ತದೆ. ಇದು ಕಾಂಗ್ರೆಸ್ ಕಾರ್ಯಕ್ರಮ ಎಂದು ಸ್ಪಷ್ಟಪಡಿಸಿದರು.
ವ್ಯಕ್ತಿ ಪೂಜೆ ಮಾಡುತ್ತಿಲ್ಲ, ಸಿದ್ದರಾಮಯ್ಯ ಹುಟ್ಟುಹಬ್ಬ. ಇಲ್ಲಿ ಮದುಮಗ ಅಂದ್ರೆ ಸಿದ್ದರಾಮಯ್ಯ. ಹಾಗಾಗಿ ಕಾರ್ಯಕ್ರಮದಲ್ಲಿ ಮುಖ್ಯವಾಗಿರ್ತಾರೆ. ನನಗೂ 75 ವರ್ಷ ಆದಾಗ ಕಾರ್ಯಕ್ರಮ ಮಾಡೋಣ. ಡಿಕೆಶಿಗೆ 75 ವರ್ಷ ಆದಾಗ ಕಾರ್ಯಕ್ರಮ ಮಾಡೋಣ. ನಾವೆಲ್ಲ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಈಗಲೇ ಅವರಿಗೆ ಸೋಲಿನ ಭೀತಿ ಆರಂಭವಾಗಿದೆ:ಮಳೆ ಸಂದರ್ಭದಲ್ಲಿ ಬಿಜೆಪಿ ಚಿಂತನ ಮಂಥನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಸೋಲಿನ ಭೀತಿ ಆರಂಭ ಆಗಿದೆ. ಹಾಗಾಗಿ ಚಿಂತನ ಮಂಥನ ಸಭೆ ಮಾಡ್ತಾ ಇದ್ದಾರೆ. ಜನರ ಸಮಸ್ಯೆ ಬಿಜೆಪಿಗೆ ಬೇಕಿಲ್ಲ. ಈಗಾಗಲೇ ಬಿಜೆಪಿ ಸೋಲುತ್ತೆ ಅಂತ ಆಂತರಿಕ ವರದಿ ಬಂದಿದೆ. ಆದ್ದರಿಂದ ಗೆಲ್ಲುವುದರ ಬಗ್ಗೆ ಸಭೆ ಮಾಡುತ್ತಿದ್ದಾರೆ.