ಬೆಂಗಳೂರು:ಹೊಸಕೆರೆಹಳ್ಳಿ ಕೆರೆಯ ಕಟ್ಟೆ ಒಡೆದು ಜಲಾವೃತವಾಗಿದ್ದ ಕೆರೆ ಪಕ್ಕದಲ್ಲಿರುವ ಪುಷ್ಪಗಿರಿ ಮತ್ತು ಪ್ರಮೋದ್ ಬಡಾವಣೆಗೆ ಮೇಯರ್ ಗೌತಮ್ ಕುಮಾರ್ ಜೈನ್ ಭೇಟಿ ನೀಡಿದರು.
ಬಿಬಿಎಂಪಿಯ ವಾರ್ಡ್-160 ರಾಜರಾಜೇಶ್ವರಿ ನಗರ ವಾರ್ಡ್ ವ್ಯಾಪ್ತಿಯ ಬಡಾವಣೆಗೆ ಭೇಟಿ ನೀಡಿದ ಅವರು, ಸ್ಥಳ ಪರಿಶೀಲಿಸಿ ಶೀಘ್ರವೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹೊಸಕೆರೆಹಳ್ಳಿ ಪ್ರದೇಶಕ್ಕೆ ಮೇಯರ್ ಭೇಟಿ ರಸ್ತೆಗಳಲ್ಲಿ ಕೆರೆಯ ನೀರು ಹರಿದು ನಿಂತಿರುವ ಕೆಸರನ್ನು ಕೂಡಲೇ ಸ್ವಚ್ಛಗೊಳಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಬಿಡಿಎ ಮತ್ತು ಬಿಡಬ್ಮ್ಯೂ ಸಂಸ್ಥೆಯವರು ಈ ಕೂಡಲೇ ತಾತ್ಕಾಲಿಕ ಕ್ರಮ ಕೈಗೊಂಡು ತಡೆಗೋಡೆ ನಿರ್ಮಿಸಿ ಮತ್ತೆ ಕೆರೆಯಿಂದ ಬಡಾವಣೆಗೆ ನೀರು ಹರಿಯದಂತೆ ಕ್ರಮವಹಿಸಲು ಸೂಚಿಸಿದರು. ಈ ಕಾರ್ಯಕ್ಕೆ ಬಿಬಿಎಂಪಿ ವತಿಯಿಂದ ಸಹಕರಿಸಲು ವಲಯ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರಿಗೆ ಸೂಚಿಸಿದರು.
ಈ ವೇಳೆ ಬಡಾವಣೆಯ ನಿವಾಸಿಗಳು ಮೇಯರ್ ಬಳಿ ತಮ್ಮ ಅಳಲನ್ನು ತೊಡಿಕೊಂಡರು. ಅನೇಕ ವರ್ಷಗಳಿಂದ ಕೆರೆ ಅಭಿವೃದ್ಧಿಪಡಿಸಲಾಗುವುದೆಂದು ಆಶ್ವಾಸನೆ ನೀಡಲಾಗುತ್ತಿದೆ ಹೊರತು, ಅಭಿವೃದ್ಧಿ ಕಾಣುತ್ತಿಲ್ಲವೆಂದು ದೂರಿದರು. ಇದಕ್ಕೆ ಸ್ಪಂದಿಸಿದ ಮೇಯರ್ ತಾತ್ಕಾಲಿಕವಾಗಿ ಪರಿಹಾರ ಹುಡುಕುವ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಂಬಂಧಿಸಿದ ಎಲ್ಲಾ ಇಲಾಖಾ ಮುಖ್ಯಸ್ಥರ ಸಭೆ ಕರೆದು ಚರ್ಚಿಸಲಿದ್ದೇನೆ ಎಂದು ಅಲ್ಲಿನ ನಿವಾಸಿಗಳಿಗೆ ಭರವಸೆ ನೀಡಿದರು.