ಬೆಂಗಳೂರು:ಕರ್ನಾಟಕ ಕಲಾ ಪರಿಷತ್ತಿನ ಸಹಯೋಗದಲ್ಲಿ ನಾಳೆಯಿಂದ 8ರ ವರೆಗೆಭಾರತ್ ಕಲಾ ಉತ್ಸವ ನಡೆಯಲಿದೆ. ಒಂದೇ ಸೂರಿನಲ್ಲಿ ಭಾರತದ ಕಲಾವಿದರ ಚಿತ್ರಗಳು ಪ್ರದರ್ಶನವಾಗಲಿದೆ. 2011ರಿಂದ ಆರಂಭವಾದ ಭಾರತ್ ಕಲಾ ಉತ್ಸವ ದೆಹಲಿ ಮುಂಬೈನಲ್ಲಿ ಆಯೋಜಿಸಲಾಗುತ್ತಿತ್ತು. ಈ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ನಾಳೆಯಿಂದ ನಾಲ್ಕು ದಿನಗಳ ಕಾಲ ಕಲಾ ಪ್ರದರ್ಶನ ನಡೆಯಲಿದ್ದು, ಆಸಕ್ತರು ಪ್ರತಿದಿನ 11 ಗಂಟೆಯಿಂದ ರಾತ್ರಿ 8 ರವರೆಗೆ ವೀಕ್ಷಣೆಗೆ ಬರಬಹುದು ಎಂದು ಸಿಕೆಪಿ ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದರು.
ಕಲಾ ಪರಿಷತ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದ ಅವರು, ಪ್ರಸ್ತುತ ಕಲಾ ಉತ್ಸವದಲ್ಲಿ ದೇಶದ ಪ್ರತಿಷ್ಠಿತ 25 ಕಲಾ ಗ್ಯಾಲರಿಗಳು ಮತ್ತು 100ಕ್ಕೂ ಅಧಿಕ ಖ್ಯಾತ ಕಲಾವಿದರು ಹಾಗೂ 300 ಉತ್ಸಾಹಿ ಮತ್ತು ಯುವ ಕಲಾವಿದರು ಭಾಗವಹಿಸುತ್ತಿದ್ದಾರೆ. ಅಂದಾಜು 3000ಕ್ಕಿಂತ ಅಧಿಕ ಕಲಾಕೃತಿಗಳು, 80 ಕ್ಕೂ ಅಧಿಕ ಮಳಿಗೆ (ಬೂಥ್)ಗಳಲ್ಲಿ, ಈ ಕಲಾ ಉತ್ಸವದಲ್ಲಿ ಪ್ರದರ್ಶನಗೊಳ್ಳುತ್ತವೆ ಅಂತ ತಿಳಿಸಿದರು.
2011ರಿಂದ ಭಾರತ್ ಕಲಾ ಉತ್ಸವವನ್ನು ಪ್ರಾರಂಭಿಸಲಾಯಿತು. ಈ ಕಲಾ ಉತ್ಸವದ ರೂವಾರಿ ಮುಂಬೈನ ರಾಜೇಂದ್ರ ಪಾಟೀಲ್. ಆರಂಭದಲ್ಲಿ ದೆಹಲಿ ಹಾಗೂ ಮುಂಬೈಗಳ ಕ್ರಮವಾಗಿ ಆಯೋಜಿಸಿಕೊಂಡು ಬಂದಿದ್ದಾರೆ. ಈ ಸಲ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಉತ್ಸವದ ಮೂಲ ಉದ್ದೇಶ, ಸಮಕಾಲೀನ ಕಲಾವಿದರನ್ನು ಮತ್ತು ಕಲಾಕೃತಿಗಳನ್ನು ಒಂದೇ ಸೂರಿನಡಿ ತರುವುದು ಹಾಗೂ ಪ್ರದರ್ಶಿಸುವುದಾಗಿದೆ ಎಂದರು.