ಬೆಂಗಳೂರು: ಸರ್ಕಾರದ ಯೋಜನೆಗಳ ಮೇಲೂ ಲಾಕ್‌ಡೌನ್ ಸಾಕಷ್ಟು ಪರಿಣಾಮ ಬೀರಿದೆ. ಮಾತೃಪೂರ್ಣ ಯೋಜನೆ ಮೇಲೂ ಅದರ ಪ್ರಭಾವ ಇಲ್ಲದಿಲ್ಲ.ಆದರೆ, ಈಗ ಅದರ ಪರಿಸ್ಥಿತಿ ಹೇಗಿದೆ ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ.
ಮಾತೃಪೂರ್ಣ ಯೋಜನೆ.. ಗರ್ಭಿಣಿ ಹಾಗೂ ಬಾಣಂತಿಯರ ಅಪೌಷ್ಟಿಕತೆ ನೀಗಿಸಲು ಮತ್ತು ತಾಯಿಯಂದಿರ ಮರಣ ಪ್ರಮಾಣ ಕಡಿತವಾಗಿಸಲು ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆ. ಆದರೆ, ಸರ್ಕಾರದ ಈ ಯೋಜನೆ ಬಗ್ಗೆ ಸಾಕಷ್ಟು ಆರೋಪಗಳು ಇವೆ. ನಗರ ಬಿಟ್ಟರೆ ಹಳ್ಳಿಗಳಲ್ಲಿ ಈ ಯೋಜನೆಗೆ ಸಿಕ್ಕ ಯಶಸ್ಸು ಅಷ್ಟಕಷ್ಟೇ.. ಲಾಕ್ಡೌನ್ಗೂ ಮುನ್ನ ಕೊಡಗು, ರಾಯಚೂರು ಜತೆಗೆ ಮಲೆನಾಡಿನ ಭಾಗದ ಜಿಲ್ಲೆಗಳಲ್ಲಿ ಮಾತೃ ಅಪೂರ್ಣ ಯೋಜನೆಯಾಗಿತ್ತು. ಆದರೀಗ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಮಾತೃಪೂರ್ಣ ಯೋಜನೆಗೆ ಉತ್ತಮ ಸ್ಪಂದನೆ ರಾಯಚೂರಿನಲ್ಲಿ ಮಾತೃಪೂರ್ಣ ಅಲ್ಲದೇ, ಜನನಿ ಶಿಶು ಸುರಕ್ಷಾ ಕಲ್ಯಾಣ ಯೋಜನೆಯಡಿ ತಾಯಿ, ಮಗುವಿನ ಮುತುವರ್ಜಿವಹಿಸಲಾಗುತ್ತಿದೆ. ಹೆರಿಗೆ ವೇಳೆ ಉಚಿತ ಶಸ್ತ್ರಚಿಕಿತ್ಸೆ, ಔಷಧ ಒದಗಿಸುವುದು ಮತ್ತು ನಗು-ಮಗುವಿನ ವಾಹನದ ಮೂಲಕ ತಾಯಿ ಹಾಗೂ ಮಗುವನ್ನ ಸುರಕ್ಷಿತವಾಗಿ ಮನೆಗೆ ತಲುಪಿಸುವ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್, ಆ್ಯಂಬುಲೆನ್ಸ್, ರಕ್ತ ಪರೀಕ್ಷೆ ಜತೆಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖಮಾಡಬೇಕಾದ ಅನಿವಾರ್ಯತೆ ಇದೆ.
ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಹಾಗೂ ಬಾಣಂತಿಯರಿಗೆ 4 ಕೆಜಿ ಅಕ್ಕಿ, 25 ಮೊಟ್ಟೆ, ಶೇಂಗಾ ಬೀಜ, ಹಾಲಿನಪುಡಿ, ಹೆಸರುಕಾಳು, ಸಕ್ಕರೆ ಹಾಗೂ ಸೋಡಿಯಂ ಉಪ್ಪು ಸೇರಿಸಿ ಒಂದು ಫುಡ್‌ಕಿಟ್ ನೀಡಲಾಗುತ್ತದೆ. ಈ ಹಿಂದೆ ಯಾರೂ ಅಂಗನವಾಡಿ ಕೇಂದ್ರಗಳತ್ತ ಬರದವರು ಲಾಕ್‌ಡೌನ್ ಮುಗಿಯುತ್ತಿದ್ದಂತೆ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ.