ಬೆಂಗಳೂರು:ನಾಲ್ಕನೇ ಅಲೆ ಭೀತಿ ಹಿನ್ನೆಲೆ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ಸಾರ್ವಜನಿಕ ಸ್ಥಳ, ಸಂಚಾರದ ವೇಳೆ, ಕೆಲಸದ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಎರಡು ಅಡಿ ಅಂತರ ಕಾಯ್ದುಕೊಳ್ಳುವಂತೆ ಆದೇಶ ಮಾಡಲಾಗಿದೆ.
ದಿಲ್ಲಿ, ಹರಿಯಾಣ, ತಮಿಳುನಾಡಿನಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದರ ಜೊತೆಗೆ, ಕರ್ನಾಟಕದಲ್ಲೂ ನಿಧಾನವಾಗಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್ ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. ಜೊತೆಗೆ ಪ್ರಧಾನಿ ಸಭೆ ಬಳಿಕ ಮತ್ತೊಂದು ಸಭೆ ಸೇರಿ ಪ್ರಧಾನಿ ನೀಡುವ ನಿರ್ದೇಶನಗಳನ್ನು ಆಧರಿಸಿ ಮುಂದುವರೆಯುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದಲ್ಲಿನ ಕೋವಿಡ್ ನಿಯಂತ್ರಣ ಸ್ಥಿತಿಗತಿ ಕುರಿತು ಅವಲೋಕಿಸಲಾಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರೋಗ್ಯ ಸಚಿವ ಸುಧಾಕರ್, ಕೋವಿಡ್ ನಾಲ್ಕನೇ ಅಲೆ ಬರಬಹುದೆಂಬ ಸಾಧ್ಯತೆ ಹಿನ್ನೆಲೆಯನ್ನು ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದೇವೆ.
ಪ್ರಮುಖವಾಗಿ ಕೆಲವು ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಕಡ್ಡಾಯವಾಗಿ ಮಾಸ್ಕ್ ಧರಿಸಲು ಮಾರ್ಗಸೂಚಿ ಹೊರಡಿಸುತ್ತೇವೆ, ಪ್ರಧಾನಿ ವರ್ಚುಯಲ್ ಸಭೆ ಬಳಿಕ ಹೊಸ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ ಎಂದರು. ಮಾಸ್ಕ್ ಕಡ್ಡಾಯ ಮಾಡಬೇಕು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದರೂ ಸದ್ಯಕ್ಕೆ ದಂಡ ವಿಧಿಸಲ್ಲ ಅದನ್ನ ಮುಂದಿನ ದಿನಗಳಲ್ಲಿ ಪರಿಶೀಲಿಸಿ ನಿರ್ಧರಿಸಲಾಗುತ್ತದೆ.