ಬೆಂಗಳೂರು :ನಗರದ ವ್ಯಾಪ್ತಿಯಲ್ಲಿ ಮನೆಗಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಇಬ್ಬರು ನೇಪಾಳ ಮೂಲದ ಕಳ್ಳರನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಕೊಳಲು ಗ್ರಾಮದಲ್ಲಿ ನೇಪಾಳ ಮೂಲದ ರಾಮ್ ಬಹದ್ದೂರ್, ಕಮಲ್ರಾಜ್ ಇಬ್ಬರು ಸೆಕ್ಯೂರಿಟಿ ಕೆಲಸ ಮಾಡಿಕೊಂಡು ತಡ ರಾತ್ರಿ ಮನೆಗಳ್ಳತನಕ್ಕೆ ಇಳಿಯುತ್ತಿದ್ದರು.
ಇದಕ್ಕೆ ಸಂಬಂಧಿಸಿದಂತೆ ಮಾರತ್ತಹಳ್ಳಿ ಸಮೀಪದ ಮುನೇಕೊಳಲು ಶಿರಡಿ ಸಾಯಿ ನಗರದಲ್ಲಿ ಮನೆಯ ಬಾಗಿಲಿನ ಲಾಕ್ ಮುರಿದು ರೂಮಿನ ಕಬೋರ್ಡ್ನಲ್ಲಿಟ್ಟಿದ್ದ 45,000 ರೂ. ನಗದು, ದುಬಾರಿ ಬೆಲೆಯ 7 ವಾಚ್ಗಳನ್ನು ದೋಚಿದ್ದಾರೆ. ಅಲ್ಲದೇ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ, ಡಿವಿಆರ್, ಹಾರ್ಡ್ ಡಿಸ್ಕ್ಗಳನ್ನು ಕದ್ದು ಪರಾರಿಯಾಗಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ದೇವರಾಜ್.. ಕಳ್ಳತನಕ್ಕೆ ಸ್ಕೆಚ್ :ಕಳ್ಳತನ ಮಾಡಿದ ಮನೆಯಲ್ಲಿ ಮೊದಲು ಇಬ್ಬರು ಖದೀಮರು ಕೆಲಸ ಮಾಡುತ್ತಾರೆ. ಮನೆಯವರು ಆಗಾಗ ಹೊರಗೆ ಹೊಗುತ್ತಿರುವುದನ್ನ ಗಮನಿಸಿ ಕೆಲಸ ತೊರೆಯುವಂತೆ ನಾಟಕ ಮಾಡಿ ಅವರಿಗೆ ಪರಿಚಯವಿರುವ ನೇಪಾಳ ಮೂಲದವರನ್ನು ಕೆಲಸಕ್ಕೆ ಸೇರಿಸಿ ಹೋಗುತ್ತಾರೆ. ನಂತರ ಮನೆಯವರು ಹೊರಗೆ ಹೋಗುವುದಕ್ಕೆ ಕಾಯುವ ಇವರು ಸ್ಕೆಚ್ ಹಾಕಿ ದರೋಡೆ ಮಾಡುತ್ತಾರೆ.
ಕದ್ದ ವಸ್ತುಗಳ ಮಾರಾಟದ ವೇಳೆ ಸಿಕ್ಕಿಬಿದ್ದರು :ಕಳೆದ 9ನೇ ತಾರೀಕಿನಂದು ಕಳ್ಳತನ ಮಾಡಿದ ಆಭರಣಗಳನ್ನು ಮಾರತ್ತಹಳ್ಳಿ ಬ್ರಿಡ್ಜ್ ಬಳಿ ಒಂದು ಚಿನ್ನದ ನೆಕ್ಲೆಸ್ ಹಾಗೂ ಒಂದು ಜೊತೆ ಮಾಟಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದನ್ನ ಗಮನಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಚಾರಣೆ ಮಾಡಿದಾಗ ಆರೋಪಿಗಳು ರಾತ್ರಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಹಗಲಿನಲ್ಲಿ ದರೋಡೆ ಮಾಡುತ್ತಿರುವುದಾಗಿ ಒಪ್ಪಿದ್ದಾರೆ. ಬಂಧಿತರಿಂದ ಎರಡು ಲಕ್ಷ ರೂ. ಮೌಲ್ಯದ 29 ಗ್ರಾಂ ಚಿನ್ನದ ಆಭರಣಗಳು, ಒಂದು ಕೆಜಿ ಬೆಳ್ಳಿ ಹಾಗೂ 4,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ.