ಬೆಂಗಳೂರು: ಸಾಮಾನ್ಯವಾಗಿ ಯುಗಾದಿ ನಂತರ ಮಾವಿನ ಹಣ್ಣಿನ ಅಬ್ಬರ ಜೋರಾಗುತ್ತಾ ಹೋಗುತ್ತದೆ. ಆದರೆ, ಈ ಬಾರಿ ಉಂಟಾಗಿರುವ ಫಸಲು ಕುಸಿತ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಕಳೆದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಶೇ 60ರಷ್ಟು ಮಾವಿನ ಹಣ್ಣು ಪೂರೈಕೆ ಕಡಿಮೆಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಎಲ್ಲ ಬೆಳೆಗಳ ಮೇಲೂ ಪ್ರಭಾವ ಬೀರುತ್ತಿದೆ. ಈ ವರ್ಷ ರಾಜ್ಯದಲ್ಲಿ ಮಳೆ ಮತ್ತು ಚಳಿಯ ಪ್ರಮಾಣ ಹೆಚ್ಚಾಗಿದ್ದರಿಂದ ಮಾವು ಬೆಳೆಯುವ ಬಹುತೇಕ ಜಿಲ್ಲೆಗಳಲ್ಲಿ ಮಾವಿನ ಹೂವಿನ ಪ್ರಮಾಣವೂ ಶೇ 50ಕ್ಕಿಂತ ಕಡಿಮೆಯಿತ್ತು.
ಮಾವು ಬೆಳೆ ಇಳಿಕೆ- ಕಾರಣವೇನು?: ಸಾಮಾನ್ಯವಾಗಿ ಮರಗಳು ಒಂದು ವರ್ಷ ಹೆಚ್ಚು ಮತ್ತು ಇನ್ನೊಂದು ವರ್ಷ ಕಡಿಮೆ ಫಸಲು ನೀಡುತ್ತವೆ. ಈ ವರ್ಷ ಮಾವಿನ ಬೆಳೆ ಏರಿಕೆಯತ್ತ ಸಾಗಬೇಕಿತ್ತು. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಮಾವಿನ ಮರಗಳಲ್ಲಿ ಪೂರ್ಣ ಪ್ರಮಾಣದ ಹೂವು ಬಿಡಬೇಕಿತ್ತು. ಆದರೆ, ನವೆಂಬರ್ನಿಂದ ಮಳೆಯಾಗಿದ್ದರಿಂದ ಹೂವು ಬಿಡುವ ಸಂದರ್ಭದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಇದರಿಂದ ಡಿಸೆಂಬರ್ ಆರಂಭದಲ್ಲಿ ಶೇ.40 ರಿಂದ 50ರವರೆಗೆ ಮಾತ್ರ ಹೂವು ಬಿಟ್ಟಿತ್ತು. ಹೀಗಾಗಿ, ಮಾವಿನ ಬೆಳೆಯಲ್ಲಿ ಈ ವರ್ಷ ಇಳಿಕೆ ಕಾಣುತ್ತಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿಯ ನಿರ್ದೇಶಕ ಸಿ.ಜಿ. ನಾಗರಾಜ್ ತಿಳಿಸಿದರು.
ಆಗಸ್ಟ್‌ವರೆಗೂ ದೊರೆಯಲಿದೆ ಮಾವು: ಪ್ರತಿ ವರ್ಷ ಮಾರ್ಚ್ 2ನೇ ವಾರದ ಸಮಯದಲ್ಲಿ ಮಾವು ಮಾರುಕಟ್ಟೆಗೆ ಬಂದು ಜುಲೈ ಅಂತ್ಯದ ಹೊತ್ತಿಗೆ ಕಾಣೆಯಾಗುತ್ತಿತ್ತು. ಆದರೆ ಈ ಸಲ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬರಲು ಆರಂಭವಾಗಿದೆ. ಅಲ್ಲದೇ, ಆಗಸ್ಟ್ ಅಂತ್ಯದವರೆಗೂ ಮಾರುಕಟ್ಟೆಗಳಲ್ಲಿ ಲಭ್ಯವಿರಲಿದೆ ಎಂದು ಅವರು ಹೇಳಿದರು.