ಬೆಂಗಳೂರು: ಮಂಗಳೂರಿಗೆ ತೆರಳಲು ಅವಕಾಶ ಸಿಗದಿರುವುದಕ್ಕೆ ಸರ್ಕಾರ ಹಾಗೂ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕರಾವಳಿ ಜಿಲ್ಲೆಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿದರೆ ಅಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ. ಸುಳ್ಳು ಹೇಳಿಕೆಯಿಂದ ಕೋಮುದ್ವೇಷ ಪ್ರಚೋದಿಸಿದ ಪ್ರಕರಣಗಳ ಇತಿಹಾಸವೇ ಇವರಿಗಿದೆ ಎಂದು ಲೇವಡಿ ಮಾಡಿದ್ದಾರೆ.
ಮುಖ್ಯಮಂತ್ರಿ ಬಿಎಸ್ವೈ ಅವರೇ ಕೋಮುಗಲಭೆಗೆ ಪ್ರಚೋದನೆ ನೀಡುತ್ತಾ ಬಂದಿರುವ ಶೋಭಾ ಕರಂದ್ಲಾಜೆ ಅವರನ್ನು ಜೊತೆಯಲ್ಲಿ ಕಟ್ಟಿಕೊಂಡು ಮಂಗಳೂರಿಗೆ ಹೋಗುತ್ತಾರೆ. ನಮ್ಮನ್ನು ಅಲ್ಲಿಗೆ ಹೋಗದಂತೆ ನಿರ್ಬಂಧಿಸುತ್ತಾರೆ. ಮುಖ್ಯಮಂತ್ರಿಗಳ ಉದ್ದೇಶ ಏನು? ಶಾಂತಿ ಸ್ಥಾಪನೆಯೇ? ಶಾಂತಿ ಕದಡುವುದೇ? ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.
ನಿಷೇಧಾಜ್ಞೆ ತೆರವಾದ ಬಳಿಕ ತಾವು ಮಂಗಳೂರಿಗೆ ತೆರಳಲಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಅಲ್ಲಿನ ಜನರ ಕಷ್ಟದ ಬಗ್ಗೆ ನನಗೆ ಕನಿಕರವಿದೆ ಎಂದು ಬೆಳಗ್ಗೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ತಿಳಿಸಿದ್ದರು. ಈ ವಿಚಾರವನ್ನು ಕೂಡ ಟ್ವೀಟ್ ಮೂಲಕ ತಿಳಿಸಿದ್ದರು. ಇದೀಗ ಮತ್ತೊಮ್ಮೆ ಟ್ವೀಟ್ ಮಾಡಿ ಬೇಸರ ಹೊರ ಹಾಕಿದ್ದಾರೆ.