ಬೆಂಗಳೂರು : ಲೋಕಸಭಾ ಚುನಾವಣೆಯ ಪ್ರತಿಷ್ಠೆಯ ಕಣವಾಗಿರುವ ಮಂಡ್ಯದಿಂದ ಅಂಬರೀಷ್ ಪತ್ನಿ ಸುಮಲತಾ ಅವರು ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ಜೆಡಿಎಸ್ ನಾಯಕರು ಮಾತ್ರ ಒಮ್ಮತದಿಂದ ನಿಖಿಲ್ ಕುಮಾರಸ್ವಾಮಿ ಬೆನ್ನ ಹಿಂದೆ ನಿಂತಿದ್ದಾರೆ.
ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲು ಈಗಾಗಲೇ ಪಕ್ಷದ ನಾಯಕರು ಒಮ್ಮತದ ಮುದ್ರೆ ಒತ್ತಿದ್ದಾರೆ. ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ.ಹೀಗಾಗಿ ನಮ್ಮ ಬೆಂಬಲ ಮೈತ್ರಿ ಪಾಳಯಕ್ಕೆ.ಇನ್ನು ಸ್ಪರ್ಧಿಸುವುದು, ಬಿಡುವುದು ಸುಮಲತಾ ಅವರಿಗೆ ಬಿಟ್ಟ ವಿಷಯ. ಅವರಿಗೆ ನಮ್ಮ ಬೆಂಬಲವಿಲ್ಲ ಎಂದು ಕಾಂಗ್ರೆಸ್ ನಾಯಕ,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಸ್ಪಷ್ಟವಾಗಿ ಹೇಳಿದ್ದಾರೆ
ಮಾಜಿ ಪ್ರಧಾನಿ ದೇವೇಗೌಡರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಕೂಗಿಗೆ ಜೆಡಿಎಸ್ ನಾಯಕರು ಟಾಂಗ್ ಕೊಡುತ್ತಿದ್ದಾರೆ.ಈ ರಾಜ್ಯದಲ್ಲಿ ಸ್ಪರ್ಧಿಸಿದ ಸೋನಿಯಾಗಾಂಧಿ,ಸ್ಟೀಫನ್ ಅವರಂತವರನ್ನೇ ಗೆಲ್ಲಿಸಿ ಕಳಿಸಿದವರು ನಾವು.ಈಗ ಈ ನೆಲದ ಮಗ ನಿಖಿಲ್ ಸ್ಪರ್ಧಿಸಿದರೆ ತಪ್ಪೇನು?ಎಂದು ಬಹಿರಂಗವಾಗಿಯೇ ನಾಯಕರು ಪ್ರಶ್ನಿಸುತ್ತಿದ್ದಾರೆ.
ರಾಜಕಾರಣದಲ್ಲಿ ಯಾವ್ಯಾವ ಅಂಶಗಳು ಕೆಲಸ ಮಾಡುತ್ತವೆ ಎಂದು ಹೇಳಲಾಗುವುದಿಲ್ಲ. ಜನರಿಗೆ ಗೊತ್ತೇ ಇಲ್ಲದಿದ್ದ ಪತ್ರಕರ್ತ ಪ್ರತಾಪ್ ಸಿಂಹ ಅವರು ಮೈಸೂರಿನಿಂದ ಸ್ಪರ್ಧಿಸಿ ಗೆಲ್ಲಲಿಲ್ಲವೇ?ಎನ್ನುತ್ತಾರೆ ನಾಯಕರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಎಂದು ಪಕ್ಷ ಘೋಷಿಸಿದೆ.ಹೀಗಿರುವಾಗ ಅವರನ್ನು ಗೆಲ್ಲಿಸಿ ಕಳಿಸುವುದೇ ನಮ್ಮ ಗುರಿ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸಹ ಹೇಳಿದ್ದಾರೆ.
ಈ ಚರ್ಚೆ ತೀವ್ರವಾಗಿರುವಾಗಲೇ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು,ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರೇ ನಮ್ಮ ಅಭ್ಯರ್ಥಿ.ಅವರು ಗೆಲ್ಲುವುದು ಕೂಡಾ ಖಚಿತ ಎಂದು ಹೇಳಿದ್ದಾರೆ. ನಿಖಿಲ್ ಅವರು ಸ್ಪರ್ಧಿಸುವುದರಲ್ಲಿ ತಪ್ಪೇನಿದೆ?ಕುಟುಂಬ ರಾಜಕಾರಣದ ಮಾತೇ ಈಗ ಅಪ್ರಸ್ತುತ.ಯಾವ ರಾಜಕೀಯ ಪಕ್ಷದಲ್ಲಿ ಕುಟುಂಬ ರಾಜಕೀಯವಿಲ್ಲ?ಎಂದೂ ಅವರು ಪ್ರಶ್ನಿಸಿದ್ದಾರೆ. ಯಾರು ಎಲ್ಲಿಂದ ಸ್ಪರ್ಧಿಸಬೇಕು ಎಂದು ಪಕ್ಷ ನಿರ್ಧರಿಸುತ್ತದೆ.ಅವರನ್ನು ಗೆಲ್ಲಿಸಲು ನಾವು ಹೋರಾಡುತ್ತೇವೆ.ಹಾಗೆಯೇ ನಿಖಿಲ್ ಕುಮಾರಸ್ವಾಮಿ ಅವರನ್ನೂ ಗೆಲ್ಲಿಸಿ ಲೋಕಸಭೆಗೆ ಕಳಿಸುತ್ತೇವೆ ವಿಶ್ವಾಸದಿಂದ ನುಡಿದಿದ್ದಾರೆ.