ಬೆಂಗಳೂರು: ಕುಡಿದ ಮತ್ತಿನಲ್ಲಿ ನಿನ್ನೆ ತಡರಾತ್ರಿ ರಸ್ತೆಯಲ್ಲಿ ಅಡ್ಡಗಟ್ಟಿ ಮೊಬೈಲ್ ಕಸಿದುಕೊಳ್ಳಲು ಮುಂದಾದ ವ್ಯಕ್ತಿಯ ಮೇಲೆ ಕಲ್ಲಿನಿಂದ ಹೊಡೆದು ವ್ಯಕ್ತಿಯೋರ್ವ ಕೊಲೆ ಮಾಡಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ಕೋಣನಕುಂಟೆ ನಿವಾಸಿಯಾಗಿರುವ ಮಂಜುನಾಥ್ನನ್ನು ಹತ್ಯೆ ಮಾಡಿದ ಆರೋಪದಡಿ ಮಂಡ್ಯ ಮೂಲದ ಶರತ್ ಎಂಬಾತನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಚಿಕನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ತನ್ನ ತಾಯಿಯೊಂದಿಗೆ ವಾಸವಾಗಿದ್ದ. ಮಂಜುನಾಥ್ ವಿರುದ್ಧ 2014ರಲ್ಲಿ ಕಳ್ಳತನ ಪ್ರಕರಣ ದಾಖಲಾಗಿ ಈತನ ವಿರುದ್ಧ ರೌಡಿಶೀಟರ್ ತೆರೆಯಲಾಗಿತ್ತು.
ಕೆಲ ವರ್ಷಗಳಿಂದ ಅಪರಾಧ ಚಟುವಟಿಕೆಯಿಂದ ದೂರ ಇದ್ದಿದ್ದರಿಂದ 2019ರಲ್ಲಿ ರೌಡಿಶೀಟರ್ ಪಟ್ಟಿಯಿಂದ ಈತನನ್ನು ತೆಗೆಯಲಾಗಿತ್ತು. ಕಳೆದ ಐದು ವರ್ಷದ ಹಿಂದೆ ಮದುವೆಯಾಗಿದ್ದ ಈತನಿಗೆ ಮಕ್ಕಳಾಗಿರಲಿಲ್ಲ. ಅನಾರೋಗ್ಯದಿಂದ ಮಂಜುನಾಥ್ ಪತ್ನಿ ಒಂದೂವರೆ ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಇದರಿಂದ ಬೇಸತ್ತು ಕುಡಿತದ ದಾಸನಾಗಿ ಓಡಾಡಿಕೊಂಡಿದ್ದ.