ಬೆಂಗಳೂರು: ಕೆಎಎಸ್ ಅಧಿಕಾರಿಗಳ ನೇಮಕಾತಿ, ಮುಂಬಡ್ತಿ, ನಿವೃತ್ತಿ ನಂತರದ ಸವಲತ್ತುಗಳೂ ಸೇರಿದಂತೆ ಇನ್ನಿತರ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೆಎಎಸ್ ಅಧಿಕಾರಿಗಳ ಸಂಘದ ಹೊಸ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ 2022ರ ದಿನಚರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದ ಜನರ ಹಿತದೃಷ್ಟಿಯಿಂದ ಒಳ್ಳೆಯ ಆಡಳಿತ ನೀಡುವ ಜನೋಪಯೋಗಿ ಆಡಳಿತ ವ್ಯವಸ್ಥೆ, ತಳಸ್ತರದಲ್ಲಿರುವವರಿಗೆ ನ್ಯಾಯ ಒದಗಿಸುವ, ದೀನದಲಿರಿಗೆ ಸರ್ಕಾರದ ಕಾರ್ಯಕ್ರಮಗಳು ತಲುಪುವ ದಿಸೆಯಲ್ಲಿ ಕೆಎಎಸ್ ಅಧಿಕಾರಿಗಳ ಸೇವೆ ಸಲ್ಲಿಸಬೇಕು. ಕೆಳಸ್ತರದ ಅಧಿಕಾರಿಗಳು ದೊಡ್ಡ ಮಟ್ಟದ ಬದಲಾವಣೆ ತರಬಲ್ಲರು. ಕರ್ನಾಟಕವನ್ನು ಅಭಿವೃದ್ಧಿಗೊಳಿಸುವಲ್ಲಿ ಕೆಎಎಸ್ ಅಧಿಕಾರಿಗಳು ಮಹತ್ವದ ಪಾತ್ರ ವಹಿಸುತ್ತಾರೆ ಎಂದರು.
ಕರ್ನಾಟಕವನ್ನು ದೇಶದ ನಂ.1 ರಾಜ್ಯವನ್ನಾಗಿಸಲು ಸರ್ವಪ್ರಯತ್ನಗಳನ್ನು ಮಾಡುವ ಕರೆ ನೀಡಿದ ಸಿಎಂ, ಕೋವಿಡ್ ಒಡ್ಡಿರುವ ಸವಾಲುಗಳನ್ನು ಮೆಟ್ಟಿನಿಂತು ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪುವಂತಾಗಬೇಕು. ಗ್ರಾಮ ಮಟ್ಟದಲ್ಲಿ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಗ್ರಾಮ ಒನ್ ಹಾಗೂ ಜನಸೇವಕ ಕಾರ್ಯಕ್ರಮಗಳನ್ನು ಜನವರಿ 26 ರಂದು ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮಗಳನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು. ಸರ್ಕಾರದ ಸೇವೆ ಜನರ ಮನೆ ಬಾಗಿಲಿಗೆ ಮುಟ್ಟಿದಾಗ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದು ತಿಳಿಸಿದರು.