ಬೆಂಗಳೂರು: ಇಂದು ರಾಜ್ಯಾದೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಳ್ಳಂಬೆಳ್ಳಗ್ಗೆಯೇ ನಗರದ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಭಕ್ತಸಾಗರ ಹರಿದುಬಂದಿದೆ.
ಸಂಕ್ರಾಂತಿ ಸಂಭ್ರಮ: ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಭಕ್ತಸಾಗರ, ಸಂಜೆ ನೆರಳು-ಬೆಳಕಿನಾಟ! - ಬೆಂಗಳೂರಿನ ಗವಿಗಂಗಾದರೇಶ್ವರ ದೇವಸ್ಥಾನ
ಸುಗ್ಗಿ ಕಾಲದ ಮೊದಲ ಹಬ್ಬ ಮಕರ ಸಂಕ್ರಾಂತಿ. ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ಬದಲಿಸುವ ಪುಣ್ಯ ಕಾಲ. ಬೆಂಗಳೂರಿನ ಐತಿಹಾಸಿಕ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಪ್ರತಿ ವರ್ಷದಂತೆ ಇಂದು ಸಹ ಸೂರ್ಯ ರಶ್ಮಿ ಶಿವನ ಪಾದ ಸ್ಪರ್ಶಿಸಲಿದೆ. ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಭಕ್ತರು ಆಗಮಿಸುತ್ತಿದ್ದು, ಶಿವನ ದರ್ಶನ ಪಡೆಯುತ್ತಿದ್ದಾರೆ.
ಶಿವನಿಗೆ ಬೆಳಗ್ಗೆ 5 ಗಂಟೆಯಿಂದ ಸರಳ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಲಾಯಿತು. ನಂತರ 7.35ಕ್ಕೆ ಬೆಳಗಿನ ಮಹಾಮಂಗಳಾರತಿ ನೆರವೇರಿಸಲಾಯಿತು. ಸಂಜೆ 5.13 ರಿಂದ 5.20ರ ಸಮಯದಲ್ಲಿ ಸೂರ್ಯನ ರಶ್ಮಿ ಶಿವನ ಪಾದ ಸ್ಪರ್ಶಿಸಲಿದೆ. ಈ ವೇಳೆ ಶಿವನಿಗೆ ಕ್ಷೀರ ಹಾಗೂ ಎಳನೀರಿನ ಅಭಿಷೇಕ ಮಾಡಲಾಗುವುದು. ಇದು ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ಬದಲಿಸುವ ಪುಣ್ಯ ಕಾಲ. ಹೀಗಾಗಿ, ಸಿಲಿಕಾನ್ ಸಿಟಿಯ ಎಲ್ಲ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲಾಗುವುದು.
ಈ ವೇಳೆ ಮಾತನಾಡಿದ ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್, ದಕ್ಷಿಣಾಯನ ಪಥ ಮುಗಿಸಿ ಉತ್ತರಾಯಣಕ್ಕೆ ಸೂರ್ಯ ದೇವ ಪಥ ಬದಲಾಯಿಸುತ್ತಾನೆ. ಮಧ್ಯಾಹ್ನ 12 ಗಂಟೆವರೆಗೂ ಸ್ವಾಮಿ ದರ್ಶನ ಇರುತ್ತೆ. ಸಂಜೆ5.13ರಿಂದ 5.20 ರ ಸಮಯದಲ್ಲಿ ಸೂರ್ಯ ರಶ್ಮಿ ದೇವರನ್ನು ಸ್ಪರ್ಶಿಸುತ್ತದೆ. ಎಲ್ಲ ಭಕ್ತಾದಿಗಳು ಸಹಕರಿಸಿ, ಕೋವಿಡ್ ಮಾರ್ಗಸೂಚಿ ಅನುಸರಿಸಬೇಕು. ಇಲ್ಲದಿದ್ದರೆ, ಸರ್ಕಾರದ ಆದೇಶದಂತೆ ದೇವಸ್ಥಾನ ಬಂದ್ ಮಾಡುತ್ತೇವೆ ಎಂದರು.