ಬೆಂಗಳೂರು:ಮಹದಾಯಿ ಯೋಜನೆ ಜಾರಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ನಿರಪೇಕ್ಷಣಾ ಪತ್ರವನ್ನು ವಾಪಸ್ ಪಡೆದಿರುವುದು ಆಘಾತ ತಂದಿದೆ ಎಂದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 25 ಸಂಸದರು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಡದಿರುವುದು ಈ ಸಮಸ್ಯೆಗೆ ಕಾರಣ. ಈಗಲಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲಿ. ಮಾತನಾಡುವ ಧೈರ್ಯ ಇಲ್ಲದಿದ್ದರೆ ಪ್ರಧಾನಿ ಜತೆ ಮಾತನಾಡುತ್ತೇವೆ ಎಂದು ಟೀಕಿಸಿದರು.
ಟ್ರಿಬ್ಯುನಲ್ ಆದೇಶ ಕೊಟ್ಟ ಪ್ರಕಾರ ಜಾರಿಗೆ ತರಲಿ. ಸುಪ್ರೀಂಕೋರ್ಟ್ ಆದೇಶ ಬರುವವರೆಗೂ ಕಾಯಬೇಕು ಎಂಬ ನಿಲುವು ಸರಿಯಲ್ಲ ಎಂದ ಅವರು, ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದ ಆದೇಶಕ್ಕೆ ತಡೆ ನೀಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಮಹದಾಯಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ಇಲ್ಲದಿದ್ದರೆ ಡಿಸೆಂಬರ್ 23ರಂದು ಹುಬ್ಬಳ್ಳಿಯಲ್ಲಿ ಎಲ್ಲಾ ಹೋರಾಟಗಾರರು ಮತ್ತು ಸಂಘಸಂಸ್ಥೆಗಳ ಸಭೆ ಕರೆದಿದ್ದೇವೆ. ಹೋರಾಟ ಮುಂದುವರಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಉಪಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದರೂ ಮುಖ್ಯಮಂತ್ರಿ ಅವರಿಗೆ ಪ್ರಧಾನಿ ಭೇಟಿಗೆ ಅವಕಾಶವೇ ಸಿಗಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಕೊಂಡಿ ಕಳಚಿದಂತಿದೆ. ಗೋವಾ ಲಾಬಿಗೆ ಕೇಂದ್ರ ಸರ್ಕಾರವೂ ಮಣಿಯುವಂತೆ ಕಾಣಿಸುತ್ತಿದೆ ಎಂದು ದೂರಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಹದಾಯಿಯಿಂದ ಸಮಸ್ಯೆ ಏನಿಲ್ಲ ಎಂದು ಅವರೇ ಮಾತನಾಡ್ತಾರೆ. ಮಹದಾಯಿ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಕೇಂದ್ರ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದರು.
ಅತಿವೃಷ್ಟಿಯಿಂದ ಶೇ.60 ರಷ್ಟು ಈರುಳ್ಳಿ ಬೆಳೆ ನಾಶವಾಗಿದೆ. ಹಾಗಾಗಿಯೇ ಈರುಳ್ಳಿ ದರ ಹೆಚ್ಚಾಗಿದೆ. ದರ ಹೆಚ್ಚಳದಿಂದ ರೈತರಿಗೂ ಯಾವುದೇ ರೀತಿಯಲ್ಲಿ ಲಾಭವಾಗುತ್ತಿಲ್ಲ. ವಿದೇಶಗಳಿಂದ ಆಮದು ಮಾಡಿಕೊಂಡಿರುವ ಈರುಳ್ಳಿಯನ್ನು ಜನ ಒಪ್ಪುತ್ತಿಲ್ಲ ಎಂದು ಹೇಳಿದರು.